ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಸೀಸನ್ 9’ ವಿನ್ನರ್ ರೂಪೇಶ್ ಶೆಟ್ಟಿ ಅವರ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾ ಜನವರಿ 13ರಂದು ರಿಲೀಸ್ ಆಗಲಿದೆ.
ಗಗನ್ ಎಂ. ನಿರ್ದೇಶನ ಮಾಡಿದ್ದು ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್, ಪಂಚಮಿ ರಾವ್ ಕೂಡ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.
ತುಳು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ, ಕಿರುಚಿತ್ರ ಹಾಗೂ ಡಾಕ್ಯುಮೆಂಟರಿಗಳನ್ನು ಮಾಡಿ ಅನುಭವ ಹೊಂದಿರುವ ಗಗನ್ ಅವರು ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಮಂಗಳೂರು ಕನ್ನಡ ಶೈಲಿಯಲ್ಲಿ ಡೈಲಾಗ್ಗಳಿವೆ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಹುಡುಗನ ಜೀವನದಲ್ಲಿ ನಡೆಯುವ ಪ್ರೇಮಕಥೆ ಇದರಲ್ಲಿ ಇದೆ.
ಕ್ಲಾಸಿಕಲ್ ಡಾನ್ಸರ್ ಆದ ಪಂಚಮಿ ರಾವ್ ಅವರಿಗೆ ಇದು ಮೊದಲ ಸಿನಿಮಾ.ಪ್ರಕಾಶ್ ತುಮ್ಮಿನಾಡು, ಅರ್ಜುನ ಕಜೆ, ಪ್ರಶಾಂತ್ ಅಂಚನ್, ವಿವೇಕ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
‘ಜೋಶ್ವ ಮೀಡಿಯಾ ಪ್ರೈವೇಟ್ ಲಿಮಿಟೆಡ್’ ಬ್ಯಾನರ್ ಮೂಲಕ ಜೋಶ್ವ ಜೈಶಾನ್ ಕ್ರಾಸ್ತಾ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿನ್ಯಾಸ್ ಮಧ್ಯ, ಶಮೀರ್ ಮುಡಿಪು ಸಂಗೀತ ನಿರ್ದೇಶನ, ಶಿನೋಯ್ ವಿ ಜೋಸೆಫ್ ಹಿನ್ನೆಲೆ ಸಂಗೀತ, ಎಂ.ಕೆ. ಷಹಜಹಾನ್ ಛಾಯಾಗ್ರಹಣ, ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನ ಈ ಚಿತ್ರಕ್ಕಿದೆ.