ಹೊಸದಿಗಂತ ಡಿಜಿಟಲ್ ಡೆಸ್ಕ್ :
ಹುಬ್ಬಳ್ಳಿಯಲ್ಲಿ ಆಯೋಜಿಸಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು.
ಈ ವೇಳೆ ಯುವ ಸಮೂಹವನ್ನುದ್ದೇಶಿಸಿ ಮಾತನಾಡಿದ ಅವರು, ಮೂರು ಸಾವಿರ ಮಠ, ಸಿದ್ದರೂಡ ಮಠ ಇಂತಹ ಅನೇಕ ಮಠಗಳ ಕ್ಷೇತ್ರಕ್ಕೆ ನನ್ನ ನಮಸ್ಕಾರ. ರಾಣಿ ಚೆನ್ನಮ್ಮನ ನಾಡು, ಸಂಗೊಳ್ಳಿ ರಾಯಣ್ಣನ ಬೀಡು, ಈ ಪುಣ್ಯ ಭೂಮಿಗೆ ನನ್ನ ನಮಸ್ಕಾರಗಳು ಎಂದು ಪ್ರಧಾನಿ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಈ ಕ್ಷೇತ್ರದ ಹಲವರನ್ನ ಜ್ಞಾನಪೀಠ ಅರಸಿಬಂದಿದೆ. ಇದೇ ಕ್ಷೇತ್ರದ ಭಾರತ್ ರತ್ನ ಭೀಮಸೇನ ಜೋಶಿ, ಗಂಗೂಭಾಯಿ ಹಾನಗಲ್ ಸೇರಿದಂತೆ ಹಲವರು ಗಣ್ಯರು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು
ಈ ದೇಶಕ್ಕೆ ಒಬ್ಬರಿಗಿಂತ ಒಬ್ಬರು ಮಹಾನ್ ಸಂಗೀತಗಾರರನ್ನು ನೀಡಿದೆ. ಕುಮಾರ್ ಗಂಧರ್ವ, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ಬಸವರಾಜ ರಾಜಗುರು, ಪಂಡಿತ್ ಭೀಮಸೇನ ಜೋಶಿ, ವಿದುಷಿ ಗಂಗೂಬಾಯಿ ಹಾನಗಲ್ ಅವರಿಗೆ ನಾನು ನಮಿಸುತ್ತೇನೆ ಎಂದು ಹೇಳಿದರು. ಕೆಲವೇ ದಿನಗಳ ಹಿಂದೆ ಕರ್ನಾಟಕ ಮಣ್ಣಿನ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ದೇಹಾಂತ್ಯ ಮಾಡಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು.
ಏಳು ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕಾನಂದರ ಸಂದೇಶವನ್ನು ಕನ್ನಡದಲ್ಲೇ ಹೇಳಿದ ಮೋದಿ, ವಿವೇಕಾನಂದರ ಈ ಉದ್ಘೋಷ ಭಾರತದ ಯುವಕರ ಅಮೃತ ಮಂತ್ರ. ಅಮೃತಕಾಲದಲ್ಲಿ ನಮ್ಮ ಕರ್ತವ್ಯಗಳ ಮೇಲೆ ಒತ್ತು ನೀಡಿ, ನಮ್ಮ ಕರ್ತವ್ಯಗಳನ್ನು ತಿಳಿದುಕೊಳ್ಳುತ್ತ ದೇಶವನ್ನು ಮುನ್ನಡೆಸಬೇಕಿದೆ. ಸ್ವಾಮಿ ವಿವೇಕಾನಂದರಿಗೆ ಕರ್ನಾಟಕದೊಂದಿಗೆ ಅದ್ಭುತ ಸಂಬಂಧವಿತ್ತು. ಕರ್ನಾಟಕ ಹಾಗೂ ಈ ಪ್ರದೇಶಗಳಲ್ಲಿ ಅವರು ಸಂಚರಿಸಿದ್ದರು. ಬೆಂಗಳೂರಿಗೆ ಹೋಗುವ ಮುನ್ನ ಹುಬ್ಬಳ್ಳಿ-ಧಾರವಾಡಕ್ಕೂ ಆಗಮಿಸಿದ್ದರು. ಮೈಸೂರು ಮಹಾರಾಜರೂ, ಸ್ವಾಮಿ ವಿವೇಕಾನಂದರನ್ನು ಶಿಕಾಗೊ ಯಾತ್ರೆಗೆ ಕಳಿಸಲು ಸಹಾಯ ಮಾಡಿದವರು.ಕರ್ನಾಟಕದ ಈ ಬೀಡು ಅಸಂಖ್ಯಾತ ಸಂತರನ್ನು ನೀಡಿದೆ. ಅತೀ ಕಡಿಮೆ ವಯಸ್ಸಿನಲ್ಲಿ ಅಸಾಧಾರಣ ಸಾಧನೆ ಮಾಡಿದ ಪುಣ್ಯಭೂಮಿ ಇದೆ. ಕಿತ್ತೂರು ರಾಣಿ ಚೆನ್ನಮ್ಮ, ಭಾರತದ ಮಹಿಳಾ ಸ್ವಾತಂತ್ರ ಹೋರಾಟಗಾರಲಲ್ಲಿ ಪ್ರಮುಖರಾಗಿದ್ದರು. ಸ್ವಾತಂತ್ರ ಹೋರಾಟದಲ್ಲಿ ಚೆನ್ನಮ್ಮ ಹೋರಾಟ, ಸಂಗೊಳ್ಳಿ ರಾಯಣ್ಣ ಹೋರಾಟದ ಮೂಲಕ ಬ್ರಿಟೀಷರನ್ನು ಹಿಮ್ಮೆಟ್ಟಿಸಿದ್ದರು ಎಂದು ಮೋದಿ ಹೇಳಿದರು.
ಯುವ ಶಕ್ತಿ ಇದ್ದಾರೆಗ ಭವಿಷ್ಯದ ನಿರ್ಮಾಣ ಮಾಡುವುದು, ಭಾರತದ ನಿರ್ಮಾಣ ಮಾಡುವುದು ಅಷ್ಟೇ ಸುಲಭವಾಗುತ್ತದೆ. ಕಿತ್ತೂರು ಚೆನ್ನಮ್ಮ, ದೇಶದ ಪ್ರಮುಖ ಸ್ವಾತಂತ್ರ್ಯ ಸೇನಾನಿಯಲ್ಲೊಬ್ಬರು. ಚೆನ್ನಮ್ಮನ ಸೇನೆಯಲ್ಲಿದ್ದ ಸಂಗೊಳ್ಳಿ ರಾಯಣ್ಣನ ಶೌರ್ಯವು ಬ್ರಿಟಿಷ್ ಸೈನ್ಯದ ಶಕ್ತಿಯನ್ನು ಕುಂದಿಸಿತ್ತು. ನಾರಾಯಣ ಮಹಾದೇವ ದೋನಿ ಕೇವಲ 14 ವರ್ಷದಲ್ಲೇ ದೇಶಕ್ಕೆ ಪ್ರಾಣಾರ್ಪಣೆ ಮಾಡಿದರು. ಯುವಕರ ಶೌರ್ಯ ಎಂಥದ್ದು ಎಂದು, ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ತೋರಿಸಿಕೊಟ್ಟರು. ಯುವಕರನ್ನು ಒಂದೇ ಕ್ಷೇತ್ರಕ್ಕೆ ಸೀಮಿತ ಮಾಡಲಾಗದು ಎನ್ನುವುದನ್ನು ತಮ್ಮ ಇಂಜಿನಿಯರಿಂಗ್ ಸಾಧನೆಗಳ ಮೂಲಕ ಸರ್. ಎಂ ವಿಶ್ವೇಶವರಯ್ಯನವರೂ ಸಾಬೀತುಪಡಿಸಿದರು. ಇಂದಿಗೂ ವಿಜ್ಞಾನದಿಂದ ಗಣಿತದವರೆಗೆ ಯಾವುದೇ ಸ್ಪರ್ಧೆ ನಡೆದರೆ ಭಾರತೀಯ ಯುವಕರ ಸಾಮರ್ಥ್ಯವು ವಿಶ್ವವನ್ನೇ ಚಕಿತಗೊಳಿಸುತ್ತದೆ ಎಂದು ಸ್ಮರಿಸಿದರು.
ಇಂದು ಭಾರತವು ಯುವಕರ ದೇಶ. ವಿಶ್ವದ ಅತಿ ದೊಡ್ಡ ಯುವಜನರು ನಮ್ಮ ದೇಶದಲ್ಲಿದ್ದಾರೆ. ಯುವಶಕ್ತಿಯೇ ಭಾರತದ ಪಯಣದ ಚಾಲಕ ಶಕ್ತಿ. ಯುವಶಕ್ತಿಯ ಕಸನುಗಳೇ ಭಾರತದ ದಿಕ್ಕನ್ನು ಬದಲಿಸುತ್ತದೆ. ಯುವಶಕ್ತಿಯ ಬಯಕೆಗಳೇ ಭಾರತದ ಗುರಿಯನ್ನು ನಿರ್ಧರಿಸುತ್ತದೆ. ಯುವಶಕ್ತಿಯನ್ನು ನಮ್ಮ ಪರಿಶ್ರಮದಿಂದ ಸಾಕಾರಗೊಳಿಸಬೇಕಿದೆ. ನಮ್ಮ ಆಲೋಚನೆ, ದೃಷ್ಟಿಕೋನದಲ್ಲಿ ಯುವವಾಗಿರಬೇಕು ಎಂದು ಯುವಜನತೆಗೆ ಸಂದೇಶ ನೀಡಿದರು.
ಇಂದು ಭಾರತವು ವಿಶ್ವದ ಐದನೇ ದೊಡ್ಡ ಆರ್ಥಿಕತೆಯಾಗಿದ್ದು, ನಮಗೆ ಅನೇಕ ಅವಕಾಶಗಳಿವೆ. ಕೃಷಿ ಕ್ಷೇತ್ರ, ತಂತ್ರಜ್ಞಾನದ ಮೂಲಕ ಹೊಸ ಕ್ರಾಂತಿ ಉಂಟಾಗಲಿದೆ. ಇದರಿಂದ ಯುವಕರಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ.ಕ್ರೀಡಾ ಕ್ಷೇತ್ರದಲ್ಲೂ ಭಾರತ ದೊಡ್ಡ ಶಕ್ತಿಯಾಗುವತ್ತ ಸಾಗುತ್ತಿದೆ. ಭಾರತದ ಯುವಕರ ಸಾಮರ್ಥ್ಯದಿಂದಲೇ ಇದು ಸಾಧ್ಯವಾಗುತ್ತಿದೆ. ಗ್ರಾಮವಾಗಲಿ, ನಗರವಾಗಲಿ, ಎಲ್ಲ ಕಡೆಯೂ ಯುವಕರ ಉತ್ಸಾಹ ಮೇರೆ ಮೀರಿದೆ. ಇದೇ ಶಕ್ತಿಯಿಂದಲೇ ನೀವೆಲ್ಲರೂ ಭವಿಷ್ಯದ ನಾಯಕರಾಗುತ್ತೀರೀ. ಭಾರತದ ಗುರುತನ್ನು ವಿಶ್ವದಲ್ಲಿ ಮೂಡಿಸುವ ಗುರಿ ನಿಮ್ಮ ಮುಂದಿದೆ. ಇಡೀ ವಿಶ್ವವೇ ಭಾರತದ ಕಡೆಗೆ ನೋಡುತ್ತಿದೆ. ಇದು ಭಾರತದ ಶತಮಾನ. ಅನೇಕ ಜಾಗತಿಕ ಹೂಡಿಕೆದಾರರು ಭಾರತದ ಯುವಕರ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.