ಹೊಸದಿಗಂತ ಡಿಜಿಟಲ್ ಡೆಸ್ಕ್ :
ಗುರುವಾರ ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲು ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡಲಾದ ನೆನಪಿನ ಕಾಣಿಕೆಯನ್ನು ಯಲ್ಲಾಪುರದಲ್ಲಿ ನಿರ್ಮಿಸಲಾಗಿದ್ದು ವಿಶೇಷವಾಗಿದೆ.
ಪ್ರಧಾನಿಯವರಿಗೆ ರಾಷ್ಟ್ರಧ್ವಜವನ್ನೊಳಗೊಂಡ ಕಟ್ಟಿಗೆ ಅದ್ಭುತ ಕಲಾಕೃತಿಯನ್ನು ನೀಡಲಾಗಿದ್ದು, ಯಲ್ಲಾಪುರದ ಬಿಕ್ಕು ಗುಡಿಗಾರ್ ಕಲಾ ಕೇಂದ್ರದ ಸಂತೋಷ ಗುಡಿಗಾರ ಮತ್ತು ಅರುಣ ಗುಡಿಗಾರ್ ನೇತೃತ್ವದಲ್ಲಿ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಸಾಗವಾನಿ ಕಟ್ಟಿಗೆಯಲ್ಲಿ ನಿರ್ಮಿತವಾದ ಈ ಕಲಾಕೃತಿಯಲ್ಲಿ ರಾಷ್ಟ್ರೀಯ ಲಾಂಛನ, ಗಂಡಭೇರುಂಡದ ಕೆತ್ತನೆಗಳನ್ನು ಕಾಣಬಹುದಾಗಿದೆ. ಮಧ್ಯದಲ್ಲಿ ರಾಷ್ಟ್ರಧ್ವಜ ನಿರ್ಮಿಸುವ ಧಾರವಾಡದ ನೆನಪಿಗಾಗಿ, ʼನಮ್ಮ ಖಾದಿ ನಮ್ಮ ಹೆಮ್ಮೆʼ ಬರಹದೊಂದಿಗೆ ರಾಷ್ಟ್ರ ಧ್ವಜವನ್ನು ಇರಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಯುವ ಹಾಗೂ ಕ್ರೀಡಾ ಸಚಿವ ಅನುರಾಗ ಸಿಂಗ್ ಠಾಕುರ್ ಜೊತೆಗೂಡಿ ಮೋದಿಯವರಿಗೆ ನೆನಪಿನ ಕಾಣಿಕೆ ನೀಡಿದರು. ಬಿಕ್ಕು ಗುಡಿಗಾರ್ ಕಲಾ ಕೇಂದ್ರದಲ್ಲಿ ನಿರ್ಮಿಸಲಾದ ಕಲಾಕೃತಿಗಳು ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿರುವುದನ್ನು ಸ್ಮರಿಸಿ ಕೊಳ್ಳ ಬಹುದಾಗಿದೆ .