Saturday, January 28, 2023

Latest Posts

ಕೌಶಲ್ಯರಹಿತ ಶಿಕ್ಷಣ ಫಲದಾಯಕವಲ್ಲ: ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್

ಹೊಸದಿಗಂತ ವರದಿ, ಚಿಕ್ಕಬಳ್ಳಾಪುರ:

ದೇಶದ ಪ್ರತಿಷ್ಠಿತ ಟಾಟಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ರಾಜ್ಯದಲ್ಲಿರುವ 270 ಸರ್ಕಾರಿ ಕೈಗಾರಿಕಾ ಸಂಸ್ಥೆಗಳ ಪೈಕಿ 150 ಸರ್ಕಾರಿ ಕೈಗಾರಿಕಾ ಸಂಸ್ಥೆಗಳಿಗೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಆಧುನಿಕ ಸ್ಪರ್ಶ ನೀಡಿ ಉನ್ನತೀಕರಣಕ್ಕೆ ಕ್ರಮ‌ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಗುರುವಾರ ಚಿಕ್ಕಬಳ್ಳಾಪುರ ಹೊರವಲಯದ. ಎಸ್ ಜೆಸಿಐಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ 1200 ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 1200 ಸಂಸ್ಥೆಗಳ ಪೈಕಿ 270 ಸರ್ಕಾರಿ‌ ಸಂಸ್ಥೆಗಳಿದ್ದು, ಇವುಗಳಲ್ಲಿ ಸ್ವಂತ ಕಟ್ಟಡಗಳಿರುವ 150 ಸಂಸ್ಥೆಗಳನ್ನು ಐದು ಸಾವಿರ ಕೋಟಿ ರೂಪಾಯಿಗಳ ವೆಚ್ಚದೊಂದಿಗೆ ಪ್ರತಿಷ್ಠಿತ ಟಾಟಾ ಸಂಸ್ಥೆ ಸಹಯೋಗದಲ್ಲಿ ಆಧುನಿಕ‌ ಸ್ಪರ್ಶ ನೀಡಿ ಉನ್ನತೀಕರಿಸಲಾಗಿದೆ. ಈ ಸರ್ಕಾರಿ ಸಂಸ್ಥೆಗಳು ಈಗ ದೇಶಕ್ಕೆ ಮಾದರಿಯಾಗಿವೆ. ಶಿಕ್ಷಣದಲ್ಲಿ ಕೌಶಲ್ಯಗಳ ಅಗತ್ಯವಿದ್ದು, ಕೇಂದ್ರ ಸರ್ಕಾರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಸಾಮಾನ್ಯ ಪದವಿ ವಿದ್ಯಾರ್ಥಿಗಳೂ ಯಾವುದಾದರೂ ಒಂದು ಕ್ಷೇತ್ರದ ಕೌಶಲ್ಯದ ಜ್ಞಾನದೊಂದಿಗೆ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಉದ್ಯೋಗ ಪಡೆಯಬೇಕಾದರೆ ಕೌಶಲ್ಯಗಳ ಅಗತ್ಯ ಇದ್ದೇ ಇದೆ ಎಂದು ಪ್ರತಿಪಾದಿಸಿದ ಸಚಿವರು ವಿದ್ಯಾರ್ಥಿ ಯುವಜನರು ಸರ್ಕಾರದ ವಿವಿಧ ಕೌಶಲ್ಯಾಭಿವೃದ್ಧಿ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಸಲಹೆ ಮಾಡಿದರು.

ಸ್ವಾಮಿ ವಿವೇಕಾನಂದರ ದೇಶ ಮತ್ತು ಸಮಾಜದ ಪರಿಣಾಮಕಾರಿ ಬದಲಾವಣೆಗಾಗಿ ಯುವಜನರ ಮೇಲೆ ಹೆಚ್ಚು ಭರವಸೆ ಇಟ್ಟಿದ್ದರು. ವಿದ್ಯಾರ್ಥಿ ಯುವಜನರು ಸ್ವಾಮಿ ವಿವೇಕಾನಂದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಆಶಯ ಮತ್ತು ಭರವಸೆಗಳನ್ನು ಈಡೇರಿಸಬೇಕು ಎಂದು ಸಲಹೆ ಮಾಡಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಚಿಕ್ಕಬಳ್ಳಾಪುರ ಉತ್ಸವದ ಪ್ರಯುಕ್ತ ಬೃಹತ್ ಉದ್ಯೋಗ ಮೇಳವನ್ನು ಜಿಲ್ಲಾಡಳಿತದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು, ಮೇಳಕ್ಕೆ ಆನ್ ಲೈನ್ ಮೂಲಕ 27 ಸಾವಿರದ 500 ಉದ್ಯೋಗಾಕಾಂಕ್ಷಿಗಳು ನೊಂದಣಿ ಮಾಡಿಕೊಂಡಿದ್ದಾರೆ, 135 ಪ್ರತಿಷ್ಠಿತ ಉದ್ಯೋಗದಾತ ಕಂಪನಿಗಳು ಪಾಲ್ಗೊಂಡಿದ್ದು ಈ ಪೈಕಿ 4 ಸಾವಿರದ 125 ಉದ್ಯೋಕಾಂಕ್ಷಿಗಳು ಉದ್ಯೋಗ ಪಡೆಯಲು ಅರ್ಹತೆ ಪಡೆದಿದ್ದಾರೆ. 12 ಸಾವಿರಕ್ಕೂ ಹೆಚ್ಚು ಯುವಜನರು ಮೇಳಕ್ಕೆ ಹಾಜರಾಗಿದ್ದಾರೆ ಎಂದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೈಗಾರಿಕಾ ವಲಯಕ್ಕಾಗಿ 4 ಸಾವಿರ ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದರು.

ಇದೇ ವೇಳೆ ಉದ್ಯೋಗಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಇಬ್ಬರೂ ಸಚಿವರು ಕಂಪನಿಗಳ ಆದೇಶ ಪತ್ರಗಳನ್ನು ವಿತರಿಸಿದರು.
ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಆಯುಷ್ ಇಲಾಖೆ ಆಯುಕ್ತ ಜೆ.ಮಂಜುನಾಥ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!