ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಕಾಲಘಟ್ಟದಲ್ಲಿ ಸಂಪೂರ್ಣವಾಗಿ ನೆಲಕಚ್ಚಿದ್ದ ದೇಶೀಯ ವಿಮಾನಯಾನ ಉದ್ದಿಮೆಯು ಕೋವಿಡ್ ನಂತರದ ಕಾಲದಲ್ಲಿ ತುಸು ಚೇತರಿಸಿಕೊಂಡಿದ್ದು 2022ರಲ್ಲಿ ಧನಾತ್ಮಕ ಬೆಳವಣಿಗೆ ದಾಖಲಿಸಿದೆ. ದೇಶೀಯ ವಿಮಾನ ಪ್ರಯಾಣಿಕರ ದಟ್ಟಣೆಯು 2022 ರಲ್ಲಿ 1232.45 ಲಕ್ಷಗಳನ್ನು ತಲುಪಿದ್ದು 2021 ಕ್ಕೆ ಹೋಲಿಸಿದರೆ 47.05 ಶೇಕಡಾದಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಗುರುವಾರ ತಿಳಿಸಿದೆ.
2021ರ ಜನೆವರಿಯಿಂದ ಡಿಸೆಂಬರ್ ನಡುವೆ 838.14 ಲಕ್ಷಗಳಷ್ಟು ಪ್ರಯಾಣಿಕರು ದೇಶೀಯವಾಗಿ ಪ್ರಯಾಣಿಸಿದ್ದರು. ಈ ಸಂಖ್ಯೆಯಲ್ಲಿ ಏರಿಕೆಯಾಗಿ 2022ರ ಜನೆವರಿ-ಡಿಸೆಂಬರ್ ಅವಧಿಯಲ್ಲಿ 1232.45 ಲಕ್ಷಗಳಿಗೆ ತಲುಪಿದೆ. DGCA ದತ್ತಾಂಶದ ಪ್ರಕಾರ, ಏರ್ ಇಂಡಿಯಾ, ಸ್ಪೈಸ್‌ಜೆಟ್, GoFirst, IndiGo, Akasa Air, AirAsia India, Vistara ಮುಂತಾದ ಎಲ್ಲಾ ಪ್ರಮುಖ ದೇಶೀಯ ಏರ್‌ಲೈನ್‌ಗಳ ಪ್ರಯಾಣಿಕರ ದಟ್ಟಣೆಯು 2022 ರ ನವೆಂಬರ್ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್ ತಿಂಗಳಲ್ಲಿ ಏರಿಕೆ ಕಂಡಿವೆ.
ಒಟ್ಟಾರೆಯಾಗಿ ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಇಂಡಿಗೋ 56.1 ಶೇಕಡಾ ಮಾರುಕಟ್ಟೆ ಪಾಲನ್ನು ದಾಖಲಿಸಿದೆ ಮತ್ತು ವಿಸ್ತಾರಾ 9.2 ಶೇಕಡಾ ಪಾಲನ್ನು ಹೊಂದಿದೆ. ಸ್ಪೈಸ್ ಜೆಟ್ ಮತ್ತು ಏರ್ ಇಂಡಿಯಾ 8.7 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ.