ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ಲಕ್ಷಾಂತರ ರೂಪಾಯಿ ಖರ್ಚು, ದಿನಗಟ್ಟಲೆ ನಡೆಯುವ ಕಾರ್ಯಕ್ರಮಗಳು ಎಂಬ ಧೋರಣೆ ಬದಲಾಗಿ ಸರಳತೆ ಮತ್ತು ಅರ್ಥಪೂರ್ಣತೆಯತ್ತ ಯುವಪೀಳಿಗೆ ಮುಖ ಮಾಡುತ್ತಿದೆ. ಇದೇ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೆಚ್ಚು ಕೇಳಿಬರುತ್ತಿರುವ ಪದ್ಧತಿ ಭೂತ ಶುದ್ಧಿ ವಿವಾಹ. ಇದು ವೈಭವ ತೋರಿಕೆಗೆ ಅಲ್ಲ, ಜೀವನದ ಹೊಸ ಆರಂಭವನ್ನು ನೈತಿಕವಾಗಿ ಮತ್ತು ಜವಾಬ್ದಾರಿಯುತವಾಗಿ ಆಚರಿಸುವ ವಿವಾಹ ಪದ್ಧತಿ ಎಂಬುದು ಇದರ ಮೂಲ ತತ್ವ.
ಇತ್ತೀಚಿಗೆ ಸಮಂತಾ ರುತ್ ಪ್ರಭು ಮತ್ತು ಸಿನಿಮಾ ನಿರ್ಮಾಪಕ ರಾಜ್ ನಿಡಿಮೋರು ನೀಡಿದ್ದಾರೆ. ಕೊಯಮತ್ತೂರಿನ ಇಶಾ ಯೋಗ ಕೇಂದ್ರದ ಲಿಂಗ ಭೈರವಿ ನಿವಾಸದಲ್ಲಿ ನಡೆದ ಅವರ ಭೂತ ಶುದ್ಧಿ ವಿವಾಹ ಸರಳತೆ, ಆತ್ಮೀಯತೆ ಮತ್ತು ಆಧ್ಯಾತ್ಮಿಕ ಆಳತೆಯಿಂದ ಎಲ್ಲರ ಗಮನ ಸೆಳೆಯಿತು. ಆದರೆ “ಭೂತ ಶುದ್ಧಿ ವಿವಾಹ” ಎಂಬ ಪದವೇ ಅನೇಕ ಜನರಿಗೆ ಹೊಸದು. ಅದು ನಿಜವಾಗಿ ಏನು? ಯಾಕೆ ಇದನ್ನು ವಿಶಿಷ್ಟ ವಿವಾಹ ಸಂಸ್ಕಾರವೆಂದು ಕರೆಯಲಾಗುತ್ತದೆ?
ಭಾರತೀಯ ಸಂಪ್ರದಾಯಗಳಿಗೆ ಸೀಮಿತವಾಗದೇ, ಯೋಗ ವಿಜ್ಞಾನದಿಂದ ಬಂದಿರುವ ವಿವಾಹ ಪದ್ಧತಿಯೇ ಭೂತ ಶುದ್ಧಿ ವಿವಾಹ. ಇಲ್ಲಿ “ಭೂತ” ಎಂದರೆ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಎಂಬ ಮಾನವ ದೇಹವನ್ನು ರೂಪಿಸುವ ಐದು ಪಂಚಭೂತ ಅಂಶಗಳು. “ಶುದ್ಧಿ” ಎಂದರೆ ಅವುಗಳ ಶುದ್ಧೀಕರಣ ಮತ್ತು ಸಮತೋಲನ. ಸಂಸ್ಕೃತದಲ್ಲಿ ಭೂತ ಶುದ್ಧಿ ಎಂದರೆ ಅಂಶಗಳ ಶುದ್ಧೀಕರಣ ಎನ್ನುವ ಅರ್ಥ.
ಈ ವಿವಾಹದ ವಿಶೇಷತೆಗಳು:
- ಐದು ಮೂಲಭೂತ ಅಂಶಗಳನ್ನು ಸಮತೋಲನಗೊಳಿಸುವ ಆಧ್ಯಾತ್ಮಿಕ ಕ್ರಿಯೆ
- ಭಾವನಾತ್ಮಕ ಅಥವಾ ಕಾನೂನು ಬಂಧನಕ್ಕಿಂತ ಆಳವಾದ ಧಾತುರೂಪದ ಜೋಡಣೆ
- ಲಿಂಗ ಭೈರವಿಯ ಸಾನ್ನಿಧ್ಯದಲ್ಲಿ ದೇವಿ ಅನುಗ್ರಹವನ್ನು ಆಹ್ವಾನಿಸುವ ವಿಧಿ
- ಪವಿತ್ರ ಅಗ್ನಿಯ ಮುಂದೆ ಜಪ, ಅರ್ಪಣೆಗಳೊಂದಿಗೆ ನಡೆಯುವ ಸರಳ ಆಚರಣೆ
ಎಲ್ಲಿ ಮತ್ತು ಯಾರು ಮಾಡಿಸಬಹುದು?
ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ, ಅಥವಾ ಇತರ ಲಿಂಗ ಭೈರವಿ ನಿವಾಸಗಳಲ್ಲಿ ಈ ವಿವಾಹ ನಡೆಯುತ್ತದೆ. ಮೊದಲ ಬಾರಿಗೆ ಮದುವೆಯಾಗುವವರಷ್ಟೇ ಅಲ್ಲ, ಈಗಾಗಲೇ ವಿವಾಹಿತರಾಗಿದ್ದು ವ್ರತ ನವೀಕರಣ ಬಯಸುವವರಿಗೂ ಅವಕಾಶ ಇದೆ. ಆದರೆ ವಧು ಗರ್ಭಿಣಿಯಾಗಿರಬಾರದು.

