ಹೊಸದಿಗಂತ ಡಿಜಟಲ್ ಡೆಸ್ಕ್ :
ತಾನು ಪ್ರೀತಿಸಿದ ಯುವತಿಯನ್ನೇ 35 ತುಂಡುಗಳಾಗಿ ಕತ್ತರಿಸಿ ಕೊಂದಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವು ದೇಶದೆಲ್ಲೆಡೆ ಆತಂಕ ಮೂಡಿಸಿತ್ತು. ಈ ಪ್ರಕರಣದ ಆರೋಪಿ ಆಫ್ತಾಬ್ ಪೂನಾವಾಲಾ ವಿರುದ್ಧ ದೆಹಲಿ ಪೊಲೀಸರು 100 ಸಾಕ್ಷಿಯುಳ್ಳ 3,000 ಪುಟಗಳ ಕರಡು ಚಾರ್ಜ್‌ಶೀಟ್ ಸಿದ್ಧಪಡಿಸಿದ್ದಾರೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ 100 ಸಾಕ್ಷಿಗಳನ್ನು ಹೊರತುಪಡಿಸಿ, 3000 ಕ್ಕೂ ಹೆಚ್ಚು ಪುಟಗಳ ಕರಡು ಚಾರ್ಜ್ ಶೀಟ್‌ಗೆ ಫೋರೆನ್ಸಿಕ್ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಆಧಾರವಾಗಿ ನೀಡಲಾಗಿದೆ. ಜನವರಿ ಅಂತ್ಯದೊಳಗೆ ದೆಹಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ. ಅದಲ್ಲದೆ ದೆಹಲಿ ಪೊಲೀಸರು ಸಿದ್ಧಪಡಿಸಿರುವ ಚಾರ್ಜ್ ಶೀಟ್ ಕರಡನ್ನು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆ.
ಕಳೆದ ವರ್ಷ ಮೇ 18 ರಂದು ಆರೋಪಿ ಅಫ್ತಾಬ್ ಪೂನಾವಾಲಾ ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ಶ್ರದ್ಧಾ ವಾಕರ್‌ಳನ್ನು ಕತ್ತು ಹಿಸುಕಿ ಕೊಂದನು, ನಂತರ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದನು.
ಛತ್ತರ್‌ಪುರದ ಅರಣ್ಯದಿಂದ ಪತ್ತೆಯಾಗಿರುವ ಮೂಳೆಗಳು ಮತ್ತು ಅವುಗಳ ಡಿಎನ್‌ಎ ವರದಿಯು ಶ್ರದ್ಧಾ ಅವರ ಮೂಳೆಗಳು ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೇ ಆಫ್ತಾಬ್ ಪೂನಾವಾಲಾ ಅವರ ತಪ್ಪೊಪ್ಪಿಗೆ ಮತ್ತು ನಾರ್ಕೋ ಪರೀಕ್ಷೆಯ ವರದಿಯನ್ನು ಸಹ ಸೇರಿಸಲಾಗಿದೆ, ಆದಾಗ್ಯೂ ಈ ಎರಡೂ ವರದಿಗಳು ನ್ಯಾಯಾಲಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿಲ್ಲ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಜನವರಿ 4 ರಂದು, ದಕ್ಷಿಣ ದೆಹಲಿಯ ಮೆಹ್ರೌಲಿ ಅರಣ್ಯ ಪ್ರದೇಶದಿಂದ ಪತ್ತೆಯಾದ ಕೂದಲು ಮತ್ತು ಮೂಳೆಗಳ ಮಾದರಿಗಳು ಶ್ರದ್ಧಾ ಅವರ ಮಾದರಿಗಳೊಂದಿಗೆ ಹೊಂದಿಕೆಯಾಗುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.