ಸಿಎಂ ಪಟ್ಟಕ್ಕಾಗಿ ಪಕ್ಷ ಬಿಟ್ಟು ಹೋಗಿದ್ದು ನೆನಪಿದೆಯಾ? ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ಕಿಡಿ

ಹೊಸದಿಗಂತ ವರದಿ ವಿಜಯಪುರ :

ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಪಕ್ಷ ಬಿಟ್ಟು ಹೋಗಿದ್ದು ನೆನಪು ಇದೇಯಾ ನಿಮಗೆ ? ನಿಮ್ಮಿಂದ ಪಾಠವನ್ನು ಹೇಳಿಸಿಕೊಳ್ಳುವ ಅಗತ್ಯ ನನಗೆ ಇಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಜಿಲ್ಲೆಯ ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ಬಳವಾಟ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ ನಿಮಿತ್ತ ಗ್ರಾಮ ವಾಸ್ತವ್ಯ ಹೂಡಿದ್ದ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಕಟ್ಟಿದ ಪಕ್ಷವನ್ನು ಉಳಿಸಿಕೊಂಡು ಹೊರಟಿದ್ದೇವೆ ನಾವು. ಅಂಥ ಪಕ್ಷವನ್ನು, ಅವರ ಸಿದ್ಧಾಂತವನ್ನು ಗಾಳಿಗೆ ತೂರಿ ಸಿಎಂ ಕುರ್ಚಿ ಹಿಂದೆ ಓಡಿ ಹೋದವರು ಯಾರು? ನಿಮ್ಮ ಯೋಗ್ಯತೆ ಏನು ಅಂತಾ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಲು ನೀವು ಏನು ಮಾಡಿದಿರಿ ಎನ್ನುವುದು ಗೊತ್ತಿದೆ. ಧರ್ಮಸ್ಥಳದ ಸಿದ್ದವನದಲ್ಲಿ ನಡೆಸಿದ ಷಡ್ಯಂತ್ರವನ್ನು ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಾತ್ಯತೀತ ತತ್ವ ಆಸ್ತಿ ಎನ್ನುವ ರೀತಿ ವರ್ತಿಸುತ್ತಿದ್ದೀರಿ. ಜಯಪ್ರಕಾಶ್ ನಾರಾಯಣ್ ಅವರ ಸಿದ್ದಾಂತಕ್ಕೆ ನೀವು ಬದ್ಧರಾಗಿ ಇದ್ದಿದರೆ ನೀವು ಅಧಿಕಾರಕ್ಕಾಗಿ ಮಾತೃಪಕ್ಷವನ್ನು ಕಾಲಿನಲ್ಲಿ ಒದ್ದು ಹೋಗುತ್ತಿರಲಿಲ್ಲ ಎಂದು ಗುಡುಗಿದರು.

ಬಿಜೆಪಿ ಪಕ್ಷದವರಿಗಿಂತ ಭ್ರಷ್ಟಾಚಾರದಲ್ಲಿ ನಿವೇನೂ ಕಮ್ಮಿ ಇಲ್ಲ. ನೀವು ಬೇಕಾದಷ್ಟು ಅಕ್ರಮಗಳನ್ನು ನಡೆಸಿದ್ದೀರಿ. ನಾನು ಎತ್ತಿದ ಪ್ರಶ್ನೆಗಳಿಗೆ ಈವರೆಗೆ ಉತ್ತರ ಕೊಡಲು ನಿಮ್ಮಿಂದ ಆಗಿಲ್ಲ. ಮತ್ತೆ ನಮ್ಮ ಪಕ್ಷದ ಬಗ್ಗೆ ನಾಲಿಗೆ ಜಾರಿ ಬಿಡುತ್ತಿರಾ ? ನಾಚಿಕೆ ಇಲ್ಲವೇ? ಎಂದರು.

ನಾನು ಸದಾ ಜನಗಳ ಮಧ್ಯೆ ಇರುವ ಸಾಮಾನ್ಯ ವ್ಯಕ್ತಿ. ಆದರೆ ನೀವು ಸಂಜೆ 6 ಗಂಟೆಯಾದ ಮೇಲೆ ಯಾರ ಕೈಗೆ ಸಿಗುತ್ತಿದ್ದಿರಿ ? ಮಧ್ಯಾಹ್ನ ಊಟಕ್ಕೆಂದು ಹೋದರೆ ನಾಪತ್ತೆ ಆಗಿಬಿಡುತ್ತಿದ್ದಿರಿ. ಈ ಬಗ್ಗೆ ಕೂಡ ನೀವು ಭಾಷಣ ಮಾಡಬೇಕಲ್ಲವೇ ? ಎಂದು ಪ್ರಶ್ನಿಸಿದರು.

ಪಂಚರತ್ನ ರಥಯಾತ್ರೆ ಬಗ್ಗೆ ಮಾತನಾಡಿರುವ ನೀವು, ಹಾಗಾದರೆ ನಿಮ್ಮದೇನು ? ನಿಮ್ಮದು ಪ್ರಜಾಧ್ವನಿ ಅಲ್ಲ, ಅಧಿಕಾರಕ್ಕಾಗಿ ನಡೆಸುತ್ತಿರುವ ಧ್ವನಿ ಎಂದು ಟೀಕಿಸಿದರು.

ಪಂಚರತ್ನ ರಥಯಾತ್ರೆ 50 ದಿನ ದಾಟಿ ಮುನ್ನಡೆಯುತ್ತಿದೆ. ಅದು ಇವರೆಲ್ಲರ ನಿದ್ದೆಗೆಡಿಸಿದೆ. ಹೋದ ಕಡೆಯಲೆಲ್ಲಾ ನಮಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಹಿಸಿಕೊಳ್ಳುವುದು ಅವರಿಗೆ ಆಗುತ್ತಿಲ್ಲ ಎಂದರು.

ಮುದ್ದೇಬಿಹಾಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸಿ.ಎನ್. ಸೊಲ್ಲಾಪುರ, ಪಕ್ಷದ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!