ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ–ಸೌತ್ ಆಫ್ರಿಕಾ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯಕ್ಕೂ ಮುನ್ನವೇ ಪ್ರವಾಸಿ ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್ ಟೋನಿ ಡಿ ಝೋರ್ಝಿ ಮತ್ತು ವೇಗಿ ನಾಂಡ್ರೆ ಬರ್ಗರ್ ಗಾಯದ ಕಾರಣದಿಂದ ಇಂದಿನ (ಡಿ.6) ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ರಾಯಪುರದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದ ವೇಳೆ ಈ ಇಬ್ಬರೂ ಗಾಯಗೊಂಡಿದ್ದು, ವೈದ್ಯಕೀಯ ಸಲಹೆ ಹಿನ್ನೆಲೆಯಲ್ಲಿ ನಿರ್ಣಾಯಕ ಪಂದ್ಯದಿಂದ ಹೊರಬಿದ್ದಿದ್ದಾರೆ.
ದ್ವಿತೀಯ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ನಾಂಡ್ರೆ ಬರ್ಗರ್ ಗಾಯಗೊಂಡರೆ, ಟೋನಿ ಡಿ ಝೋರ್ಝಿ ಬ್ಯಾಟಿಂಗ್ ಸಮಯದಲ್ಲಿ ಕಾಲು ನೋವಿಗೆ ತುತ್ತಾಗಿದ್ದರು. ಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಇದೀಗ ಇವರಿಬ್ಬರೂ ವಿಶಾಖಪಟ್ಟಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಸೌತ್ ಆಫ್ರಿಕಾ ತಂಡ ದೃಢಪಡಿಸಿದೆ.
ಈ ಪಂದ್ಯ ಉಭಯ ತಂಡಗಳ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಆಗಿದೆ. ಮೊದಲ ಏಕದಿನದಲ್ಲಿ ಭಾರತ ಗೆಲುವು ಸಾಧಿಸಿದ್ದರೆ, ದ್ವಿತೀಯ ಪಂದ್ಯದಲ್ಲಿ ಸೌತ್ ಆಫ್ರಿಕಾ ಐತಿಹಾಸಿಕ ಜಯದೊಂದಿಗೆ ಸರಣಿಯನ್ನು ಸಮಬಲ ಮಾಡಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಗೆಲ್ಲುವ ತಂಡವೇ 2-1 ಅಂತರದಲ್ಲಿ ಸರಣಿ ಜಯಿಸಲಿದೆ.

