ಸಹೋದರರ ಮಧ್ಯೆ ಚುನಾವಣಾ ಕದನ ಏರ್ಪಡಲಿದೆ ಎಂದು ಅಂದುಕೊಂಡಿರಲಿಲ್ಲ: ಸೋಮಶೇಖರ್ ರೆಡ್ಡಿ

ಹೊಸದಿಗಂತ ವರದಿ, ಬಳ್ಳಾರಿ:

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸಹೋದರ ಗಾಲಿ ಜನಾರ್ಧನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರು ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಲಾಗಿದ್ದು, ನಾನೂ ಅಖಾಡಕ್ಕಿಳಿಯುವೆ, ಬಿಜೆಪಿಯಿಂದ ಟಿಕೆಟ್ ಸಿಗುವ ವಿಶ್ವಾಸವಿದೆ, ಒಂದುವೇಳೆ ಸಿಗದಿದ್ದರೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದು ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಸಹೋದರರ ಮಧ್ಯೆ ಈ ರೀತಿ ಚುನಾವಣಾ ಕದನ ಏರ್ಪಡಲಿದೆ ಎಂದು ಅಂದುಕೊಂಡಿರಲಿಲ್ಲ, ಮುಂಬರುವ ಚುನಾವಣೆಯಲ್ಲಿ ಸೋಮಶೇಖರ್ ರೆಡ್ಡಿ ಅವರು ತಟಸ್ಥರಾಗಿ ಉಳಿಯಲಿದ್ದಾರೆ ಎಂದು ಕೆಲವರು ಸುಳ್ಳು ಸುದ್ದಿ‌ಹಬ್ಬಿಸಲು ಮುಂದಾಗಿದ್ದಾರೆ, ಈ ಪದವೇ ನನ್ನ ಜಾಯಮಾನದಲ್ಲಿಲ್ಲ, ಚುನಾವಣೆಯಿಂದ ದೂರ ಸರಿಯುವ ಮಾತೇ ಇಲ್ಲ, ನಾನು ಜನರ ಮಧ್ಯೆ ಇರುವೆ, ಅವರ ಕಷ್ಟ ಸುಖಗಳಿಗೆ ಭಾಗಿಯಾಗಿ ಕ್ಷೇತ್ರದ ಎಲ್ಲ ಜನರ ಪ್ರೀತಿ ವಿಸ್ವಾಸವನ್ನು ಉಳಿಸಿಕೊಂಡಿರುವೆ, ಇಲ್ಲಿವರೆಗೂ ನನ್ನ ವಿರುದ್ಧ ಒಂದು ಸಣ್ಣ ಕಪ್ಪು ಚುಕ್ಕೆ ಇಲ್ಲ, ಅಷ್ಟು ಸ್ವಚ್ಛ ಹಾಗೂ ಸಮರ್ಥವಾಗಿ ಅವಧಿ ಪೂರ್ಣಗೊಳಿಸಿದ ತೃಪ್ತಿ ನನಗಿದೆ, ನಗರ ಕ್ಷೇತ್ರದ ಮತದಾರರು ಬರುವ ಚುನಾವಣೆಯಲ್ಲಿ ಆರ್ಶಿವಾದಿಸುವ ವಿಶ್ವಾಸವಿದ್ದು, ಅವರ ಸೇವೆಯೇ ನನ್ನ ಸೌಭಾಗ್ಯ, ನಾನೆಂದೂ ಅಧಿಕಾರದಾಸೆಗೆ ಎಂದೂ ಅಂಟಿಕೊಂಡವನಲ್ಲ, ಅಧಿಕಾರ ಇವತ್ತು ಇರುತ್ತೆ, ನಾಳೆ ಹೋಗುತ್ತೆ, ಯಾರಿಗೂ ಶಾಶ್ವತವಲ್ಲ, ಇರುವ ಅವಧಿಯಲ್ಲಿ ಜನರಿಗಾಗಿ‌ ನಾನೇನು ಮಾಡಿದೆ ಎನ್ನುವುದು ಮುಖ್ಯ ಎಂದರು.
ಕಳೆದ 2013ರಲ್ಲಿ ಸಹೋದರ ಜನಾರ್ದನ ರೆಡ್ಡಿ ಅವರ ಪ್ರಕರಣದಲ್ಲಿ ಜೈಲಿಗೆ ಹೋದ ಹಿನ್ನೆಲೆ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದೆ, ನನ್ನ ಗುಣ ಅವರಿಗೆ ಬೇಕಿಲ್ಲ, ಅವರಿಗೆ ತಿಳಿಯಬೇಕು, ಅವರಿಗಾಗಿ ನಾನೂ 65 ದಿನಗಳ ಕಾಲ ಜೈಲಿಗೆ ಹೋಗಿ ಬಂದೆ, ಆಗ, ಸೊಸೆ ಅರುಣಾ ಲಕ್ಷ್ಮೀ ಅವರು ಭಾವ ನನ್ನ ಕೊನೆ ಉಸಿರು ಇರುವವರೆಗೂ ನಿಮ್ಮ ಋಣ ತೀರಿಸಲು ಆಗೋಲ್ಲ ಎಂದಿದ್ದರು. ಅದೇ ರೀತಿ ಪುತ್ರಿ ಬ್ರಹ್ಮಣಿ ಅವರೂ ಹೇಳಿದ್ದರು. ಆದರೇ, ಅವರೇ ಇಂದು ನನ್ನ ವಿರುದ್ಧವೇ ಚುನಾವಣಾ ಅಖಾಡಕ್ಕಿಳಿಯಲು ಮುಂದಾಗಿದ್ದಾರೆ. ನನಗೆ ಕಸಾಪೂರ್ ಆಂಜಿನೇಯನ ಆರ್ಶಿವಾದ, ಅದಿದೇವತೆ ಶ್ರೀ ಕನಕ ದುರ್ಗಮ್ಮ ದೇವಿ ಆರ್ಶಿವಾದ, ಕೊಟೆ ಮಲ್ಲೇಶ್ವರ ಆರ್ಶಿವಾದವಿದೆ, ಕ್ಷೇತ್ರದ ಜನರ ಆರ್ಶಿವಾದ ಬೆಂಬಲವಿದೆ, ಗೆಲ್ಲುವ ವಿಶ್ವಾಸ ನನಗಿದೆ ಎಂದರು. ಹೊಸ ಪಕ್ಷ ರಚನೆ ಬೇಡ, ಎಂದು ನಾನು, ಸಚಿವ ಶ್ರೀರಾಮುಲು, ಸಹೋದರ ಕರುಣಾಕರ ರೆಡ್ಡಿ ಅವರು ಸೇರಿ ಹೇಳಿದ್ದರೂ, ಹಟಕ್ಕೆ ಬಿದ್ದು, ಹೊಸ ಪಕ್ಷ ಕಟ್ಟಿದ್ದಾರೆ, ಇದಕ್ಕೆ ಸಾಲದು ಎನ್ನುವಂತೆ ನನ್ನ ಎದುರೇ ಸೊಸೆ ಅರುಣಾ ಲಕ್ಷ್ಮೀ ಅವರನ್ನು ಸ್ಪರ್ಧೆಗೆ ಇಳಿಸಲು ಮುಂದಾಗಿದ್ದಾರೆ, ಇದಕ್ಕೆ ಬಗ್ಗುವ ಜಾಯಮಾನ ನನ್ನದಲ್ಲ, ನಾನೂ ಕೂಡಾ ಸ್ಪರ್ಧೆಗೆ ಇಳಿಯುವೆ, ನನ್ನನ್ನು ಪಕ್ಷಕ್ಕೆ ಬನ್ನಿ ಎಂದು ಆಹ್ವಾನಿಸಿದರು, ಬರಲಿಲ್ಲ ಎನ್ನುವ ಕಾರಣಕ್ಕೆ ನನ್ನ ಎದುರು ಸ್ಪರ್ಧಿಸಲು ಮುಂದಾಗಿದ್ದಾರೆ, ನಾನೂ ಎಲ್ಲದಕ್ಕೂ ಸಿದ್ದನಾಗಿರುವೆ ಎಂದು ಕಿಡಿಕಾರಿದರು. ಸೋಮಶೇಖರ್ ರೆಡ್ಡಿ ಯಾವತ್ತೂ ಅಕ್ರಮಕ್ಕೆ ಅವಕಾಶ ಕೊಟ್ಟಿಲ್ಲ, ಕೋಡೋದು ಇಲ್ಲ, ಅವರ ಹಿಂದೆ ಇದ್ದರೇ ಹಣ ಸಿಗಲ್ಲ ಎಂದು ಕೆಲವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ, ಪಕ್ಷದ ನಿಷ್ಠರು ಅಭಿಮಾನಿಗಳು ನಮ್ಮ ಜೊತೆ ಇದ್ದೇ ಇರಲಿದ್ದಾರೆ, ಕ್ಷೇತ್ರದ ಜನರ ಆರ್ಶಿವಾದವೂ ಇದೆ. ಕಳೆದ 5ವರ್ಷಗಳ ಅವದಿಯಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸಗಳು ಏನು ಎಂಬುದು ಜನರಿಗೆ ಗೊತ್ತಿದೆ, ನನ್ನ ಪ್ರಾಮಾಣಿಕತೆ, ಬಡವರ ಬಗ್ಗೆ ಗೌರವ, ಕಾಳಜಿ ನಂದು ಎಷ್ಟರಮಟ್ಟಿಗೆ ಇದೆ ಎಂಬುದು ನಾನು ಹೇಳೋಲ್ಲ, ಅವರನ್ನೇ ಕೇಳಿ, ನನ್ನ ಪ್ರಾಮಾಣಿಕತೆಯೇ ಮುಂಬರುವ ಚುನಾವಣೆಯಲ್ಲಿ ಕೈ ಹಿಡಿಯಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!