ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ನಿರಂತರ ಮತ್ತು ಸುಗಮ ವಹಿವಾಟುಗಳಿಗಾಗಿ ಎಲ್ಲಾ ಹೂಡಿಕೆದಾರರು ಮಾರ್ಚ್ 31ರೊಳಗೆ ತಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವಂತೆ ಬಂಡವಾಳ ಮಾರುಕಟ್ಟೆಗಳ ನಿಯಂತ್ರಕ ಸೆಬಿ ನಿರ್ದೇಶಿಸಿದೆ.
ಒಂದು ವೇಳೆ ಲಿಂಕ್ ಆಗದೇ ಇದ್ದಲ್ಲಿ ಅದನ್ನು ನಾನ್-ಕೆವೈಸಿ ಕಂಪ್ಲೈಂಟ್ ಎಂದು ಪರಿಗಣಿಸಲಾಗುತ್ತದೆ. ಹೀಗೆ ಲಿಂಕ್ ಆಗದೇ ಇರುವ ಖಾತೆಗಳ ಮೇಲೆ ಸೆಕ್ಯೂರಿಟಿಗಳು ಮತ್ತು ಇತರ ವಹಿವಾಟುಗಳ ಮೇಲೆ ನಿರ್ಬಂಧಗಳು ವಿಧಿಸಲ್ಪಡಬಹುದು ಎಂದು ಸೆಬಿ ಹೇಳಿಕೆಯಲ್ಲಿ ತಿಳಿಸಿದೆ.
ಮಾರ್ಚ್ 31, 2023 ರೊಳಗೆ ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ ವ್ಯಕ್ತಿಗೆ ಮಂಜೂರು ಮಾಡಲಾದ ಪ್ಯಾನ್ ನಿಷ್ಕ್ರಿಯವಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (CBDT) ಮಾರ್ಚ್ 2022 ರಲ್ಲಿ ಸುತ್ತೋಲೆಯನ್ನು ಹೊರಡಿಸಿತ್ತು. ಲಿಂಕ್ ಮಾಡಿಸದೇ ಇರುವವರು 1961ರ ತೆರಿಗೆ ಕಾಯಿದೆಯ ಅಡಿಯಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳ ಅನ್ವಯ PAN (ಪರ್ಮನೆಂಟ್ ಅಕೌಂಟ್ ನಂಬರ್) ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನಿಗದಿತ ಪ್ರಾಧಿಕಾರಕ್ಕೆ ತಿಳಿಸಬೇಕಾಗುತ್ತದೆ. ಪ್ರಸ್ತುತ ಮಾರ್ಚ್ 31 ಆಧಾರ್-ಪ್ಯಾನ್ ಲಿಂಕ್ ಮಾಡಲು ಕೊನೆಯ ಗಡುವಾಗಿದೆ.