ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೊ.ಎಂ.ಬಿ.ಪುರಾಣಿಕ್ ತುಳುನಾಡು ಎಜುಕೇಶನ್ ಟ್ರಸ್ಟ್ ನಡಿಯಲ್ಲಿ ನಡೆಯುತ್ತಿರುವ ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾಗಿದ್ದು, ಇಂದು 10ವಿದ್ಯಾಸಂಸ್ಥೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸೌಕರ್ಯವನ್ನು ಒದಗಿಸಿಕೊಟ್ಟಿದ್ದಾರೆ. ಜೊತೆಗೆ ನೂರಾರು ಮಂದಿ ಬಡವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ನೆರವಾದ ಒಬ್ಬ ಸಹೃದಯಿ ಲೋಕೋಪಕಾರಿ. ಅವರಿಗೆ ಬುಧವಾರ ಮಂಗಳೂರು ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದ್ದಾರೆ.
ಕಾಪು ಬಳಿಯ ಮಜೂರು ಭೂವರಾಹ ಪುರಾಣಿಕ್ ಅವರು ರಾಮಕೃಷ್ಣ ಪುರಾಣಿಕ್ ಮತ್ತು ಜಲಜಾಕ್ಷಿ ಪುರಾಣಿಕ್ ದಂಪತಿಯ ಸುಪುತ್ರರಾಗಿ ಜನನ. ಉಡುಪಿಯಲ್ಲಿ ಆರಂಭಿಕ ಶಿಕ್ಷಣ, ಮೈಸೂರಿನಲ್ಲಿ ಬಿಎಸ್ಸಿ, ಬಿಎಡ್, ಗುಜರಾತ್‌ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಿಂದ ಎಂಎಸ್‌ಸಿ ಮತ್ತು ಹಿಮಾಚಲ ಪ್ರದೇಶದ ವಿಶ್ವವಿದ್ಯಾಲಯಗಳಿಂದ ಎಂಎಡ್ ಪದವಿ ಗಳಿಸಿ ಶಿರ್ವದ ಸೈಂಟ್ ಮೇರೀಸ್ ಜೂನಿಯರ್ ಕಾಲೇಜಿನಲ್ಲಿ ಜೀವವಿಜ್ಞಾನ ಅಧ್ಯಾಪಕರಾಗಿ , ಬಳಿಕ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಜೀವ ವಿಜ್ಞಾನ ಉಪನ್ಯಾಸಕರಾಗಿ , ಎನ್‌ಸಿಸಿಯ ಪೈಲಟ್ ಆಫೀಸರ್ ಆಗಿ ಶಿಸ್ತಿನ ಸಿಪಾಯಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಬೋಧನೆ ಮಾಡಿದ ಸಾಧಕರು.
ಉತ್ತಮ ಎನ್‌ಸಿಸಿ ಅಧಿಕಾರಿ ಎಂಬ ಮನ್ನಣೆಯನ್ನು 1986ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಂದ ಪುರಸ್ಕೃತಗೊಂಡು, 2000ನೇ ಇಸವಿಯಲ್ಲಿ ವಿಶ್ವಸಂಸ್ಥೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಹಿರಿಮೆ ಇವರದು.ಕಳೆದ ಎರಡು ದಶಕಗಳಿಗೂ ಅಧಿಕ ಸಮಯದಿಂದ ಶಾರದಾ ವಿದ್ಯಾಸಂಸ್ಥೆಗಳ ಸಂಚಾಲಕರಾಗಿ, ಅಧ್ಯಕ್ಷರಾಗಿ ಶಿಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಪ್ರತಿವರ್ಷ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ನೆರವಾಗುತ್ತಿದ್ದಾರೆ.
ಹಾಗೆಯೇ ಸಾಮಾಜಿಕ, ರಾಷ್ಟ್ರೀಯ, ಧಾರ್ಮಿಕ , ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಶ್ವಹಿಂದು ಪರಿಷತ್ತಿನ ಪ್ರಾಂತ ಅಧ್ಯಕ್ಷರಾಗಿ, ವಿದ್ಯಾಭಾರತಿ ಅಖಿಲಭಾರತೀಯ ಶಿಕ್ಷಾ ಸಂಸ್ಥಾನ್ ಪ್ರಮುಖರಾಗಿ,ಪಜೀರು ಗೋವನಿತಾಶ್ರಯ ಟ್ರಸ್ಟ್‌ನ ಅಧ್ಯಕ್ಷರಾಗಿ, ಹೊಸದಿಗಂತ ದೈನಿಕದ ಆಡಳಿತ ಮಂಡಳಿ ಜ್ಞಾನಭಾರತಿ ಪ್ರಕಾಶನ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿ, ಕುತ್ತಾರು ಪದವು ಬಾಲಸಂರಕ್ಷಣಾ ಕೇಂದ್ರದ ವಿಶ್ವಸ್ಥರಾಗಿ , ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಗಳ ಪ್ರಮುಖರಾಗಿ , ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ನೇತೃತ್ವ ವಹಿಸಿ ಕೆಲಸ ಮಾಡುತ್ತಿದ್ದಾರೆ ಪ್ರೊ.ಪುರಾಣಿಕ್ ಅವರು.
ಕೃಷಿ, ಉದ್ಯಮ ಕ್ಷೇತ್ರದಲ್ಲೂ ಸಾಧನೆಗೈದ ಪ್ರೊ.ಪುರಾಕ್ ಅವರು ಹೆಸರು, ಪ್ರಸಿದ್ಧಿಯ ಬೆನ್ನುಬೀಳದೆ ಸಾಮಾಜಿಕ ಕಳಕಳಿಯಿಂದ ಈ ಇಳಿವಯಸ್ಸಿನಲ್ಲೂ ದವರಿಯದೆ ಕೆಲಸ ಮಾಡುವ ಮೂಲಕ ಜನಪ್ರೀತಿ, ಗೌರವಕ್ಕೆ ಭಾಜನರಾದ ಸಾಧಕರಾಗಿದ್ದಾರೆ.