– ಶಿವಲಿಂಗಯ್ಯ ಹೊತಗಿಮಠ
ಲಕ್ಷ್ಮೇಶ್ವರ ತಾಲೂಕಿನ ಆದರದಹಳ್ಳಿ ಗ್ರಾಮದಲ್ಲಿ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ಮಹಾ ತಪಸ್ವಿ ಡಾ.ಕುಮಾರ ಮಹಾರಾಜ ಅವರ ನೇತೃತ್ವದಲ್ಲಿ ಕೊಬ್ಬರಿ ಹೋರಿ ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಆದರದಹಳ್ಳಿ, ಲಕ್ಷ್ಮೇಶ್ವರ, ಹಾವೇರಿ,ಗದಗ, ಕೋಲಾರ ಹಾಗೂ ರಾಜ್ಯದ ವಿವಿಧ ಜೆಲ್ಲೆಗಳು ಸೇರಿದಂತೆ ಹೊರ ರಾಜ್ಯಗಳ ವಿವಿಧೆಡೆಯಿಂದ 200ಕ್ಕೂ ಅಧಿಕ ಹೋರಿಗಳು ಪಾಲ್ಗೊಂಡಿದ್ದವು.
ಡಾ. ಕುಮಾರ ಮಹಾರಾಜರ ನೇತೃತ್ವದಲ್ಲಿ ಪ್ರತಿವರ್ಷ ಹಾವೇರಿ ಜಿಲ್ಲೆಯ ಕೃಷ್ಣಪೂರ ಗ್ರಾಮದಲ್ಲಿ ಹೋರಿ ಓಡಿಸುವ ಹಬ್ಬ ನಡೆಸುತ್ತ ಬಂದಿದ್ದಾರೆ. ಈಗ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರದಹಳ್ಳಿ ಗ್ರಾಮದಲ್ಲಿ ಪ್ರಥಮ ಬಾರಿಗೆ ಹೋರಿ ಹಬ್ಬ ನಡೆದಿದೆ. ಅಖಾಡದಲ್ಲಿ ಹೋರಿ ಅಭಿಮಾನಿಗಳು ಹಾಗೂ ರೈತರು ಕೇಕೆ, ಸಿಳ್ಳೆ, ಚಪ್ಪಾಳೆಗಳ ಮೂಲಕ ಹೋರಿಗಳಿಗೆ ಮತ್ತಷ್ಟು ಹುರಿದುಂಬಿಸಿದರು. ಹೋರಿಗಳ ಮಿಂಚಿನ ಓಟ ಕಣ್ಮನ ಸೆಳೆದವು.
ಹೋರಿ ಮಾಲೀಕರು ಹೋರಿಗಳಿಗೆ ಶೇಂಗಾ ಹಿಂಡಿ, ಶೇಂಗಾ ಹೊಟ್ಟು, ಮೇವು, ಮೊಟ್ಟೆ ಸೇರಿದಂತೆ ವಿವಿಧ ರೀತಿಯ ಪೌಷ್ಟಿಕ ಪದಾರ್ಥ ತಿನ್ನಿಸಿ ಹೋರಿಗಳನ್ನು ಕಟ್ಟು ಮಸ್ತಾಗಿ ತಯಾರು ಮಾಡಿರುತ್ತಾರೆ. ಕೊಬ್ಬರಿ ಹಾರ, ಜೂಲಾ, ಕೋಡಿಗೆ ಚಟ್ಟು, ಬಲೂನಿನ ಪೀಪಿ ಕಟ್ಟಿಕೊಂಡ ಹೋರಿಗಳು ಭರ್ಜರಿಯಾಗಿ ಮಿಂಚಿನ ಓಡಿದವು.
ಓಡುವ ಹೋರಿಗಳನ್ನು ತಡೆದು ನಿಲ್ಲಿಸುವುದಕ್ಕೆ ಅಖಾಡದಲ್ಲಿ ಪೈಲ್ವಾನರು ಎಲ್ಲಿಲ್ಲದ ಹರಸಾಹಸ ಪಟ್ಟರು. ಕೆಲವು ಹೋರಿಗಳನ್ನು ಪೈಲ್ವಾನರು ತಡೆದು ನಿಲ್ಲಿಸಿದರೆ, ಬಹುತೇಕ ಹೋರಿಗಳು ಪೈಲ್ವಾನರ ಕೈಗೆ ಸಿಗದಂತೆ ಶರವೇಗದಿ ಓಡಿ ಗೆಲುವಿನ ದಡ ಸೇರಿದವು.
ಹೋರಿ ಮಾಲೀಕರು ಹೋರಿಗಳಿಗೆ ಪ್ರತಿದಿನ ಬೆಳಿಗ್ಗೆ ರನ್ನಿಂಗ್, ಸ್ವಿಮ್ಮಿಂಗ್ ಮಾಡಿಸಿ ಹೋರಿ ಹಬ್ಬಕ್ಕೆ ತಯಾರು ಮಾಡಿತ್ತಾರೆ. ಹೀಗೆ ತಯಾರು ಮಾಡಿದ ಹೋರಿಗಳನ್ನು ತಂದು ಅಖಾಡದಲ್ಲಿ ಬಿಟ್ಟು ಓಡಿಸುತ್ತಾರೆ. ಆದರದಹಳ್ಳಿ ಮಹಾರಾಜ 200, ಜೋಗಿ 333, ಕೃಷ್ಣಪೂರ ಮಹಾರಾಜ, ಲಕ್ಷ್ಮೇಶ್ವರ ಹಿರಿಯಾನ್, ಕರ್ನಾಟಕ ರತ್ನ, ಕೊಬ್ಬರಿ ಹೋರಿ, ಆಕ್ಷನ್ ಹೋರಿ, ಗಗ್ಗರಿ ಹೋರಿ, ಪೀಪಿ ಹೋರಿ ರಾಮಗೇರಿ ರಾಕ್ಷಸ, ಕೆಲವರಪುರ ಜೋಗಿ 333, ಬ್ಯಾಡಗಿ ಮಯೂರ, ಲಕ್ಷ್ಮೇಶ್ವರ ಕಾ ಶಿವಾ, ಕೃಷ್ಣಾಪುರ ಶಕುನಿ, ಹಾವಳಿ ಆಂಜನೇಯ, ಶಿಗ್ಲಿ ಸರಕಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಶಿದ್ದಾಪುರ ಹೀಗೆ ಬಗೆಬಗೆಯ ಹೆಸರುಗಳಿಂದ ಅಲಂಕಾರಗೊಂಡ ಹೋರಿಗಳನ್ನು ಓಡಿಸಿ ಹೋರಿ ಮಾಲೀಕರು ಹಾಗೂ ಹೋರಿ ಹಬ್ಬದ ಅಭಿಮಾನಿಗಳು ಸಂಭ್ರಮಪಟ್ಟರು.
ಪಿಪಿ ಹೋರಿ ಬಂಪರ್ ಪ್ರಥಮ ಬಹುಮಾನ ಹಾವೇರಿಯ ಕರ್ನಾಟಕ ರತ್ನ ಹೆಸರಿನ ಹೋರಿ ಗಳಿಸಿದರೆ, ದ್ವೀತೀಯ ಬಹುಮಾನ ಹಾವೇರಿಯ ಜನನಾಯಕ, ತೃತೀಯ ಬಹುಮಾನ ಕೋಳೂರ ದೋರೆ ಗಳಿಸಿದ್ದು, ಕೊಬ್ಬರಿ ಹೋರಿ ಬಂಪರ್ ಪ್ರಥಮ ಬಹುಮಾನ ತಡಸಹಳ್ಳಿ ಡಾನ್, ಶಿಕಾರಿಪುರ ಗಳಿಸಿದೆ. ದ್ವೀತಿಯ ದಿಲ್ಲಿ ಧೀರ, ತೃತೀಯ ಬಹುಮಾನ ಆಕ್ಷನ್ ಕಿಂಗ್ ಅಭಿಮನ್ಯು ಗಳಿಸಿದೆ.
ನಮ್ಮ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಗ್ರಾಮೀಣ ಕ್ರೀಡೆಗಳಲ್ಲಿ ಹೋರಿಹಬ್ಬ ಜನಪ್ರಿಯವಾಗಿದೆ. ಈ ಕ್ರೀಡೆ ನಡೆಸುವುದಕ್ಕೆ ಅನೇಕರು ಉತ್ಸಾಹ ತೊರಿದ್ದು ಖುಷಿ ತಂದಿದೆ. ಎಲ್ಲರ ಸಹಕಾರದಿಂದ ಹಬ್ಬ ನಡೆದಿದ್ದು ಮುಂದೆ ಮತ್ತೆ ದೊಡ್ಡಪ್ರಮಾಣದಲ್ಲಿ ಇಂತಹ ಕ್ರೀಡೆಗಳು ನಡೆಸುತ್ತೇವೆ ಎಂದು ಗವಿಸಿದ್ದೇಶ್ವರ ಮಠದ ಮಹಾ ತಪಸ್ವಿ ಡಾ. ಕುಮಾರ ಮಹಾರಾಜರು ಹೇಳಿದರು.