ಉದ್ಯೋಗ ಕಡಿತದ ಪಿಡುಗಿನಿಂದ ಹೀಗೆ ತಪ್ಪಿಸಿಕೊಳ್ತಿದೆ ಜಾಗತಿಕ ಟೆಕ್‌ ದೈತ್ಯ ಆಪಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರ್ಥಿಕ ಅನಿಶ್ಚಿತತೆಗಳ ಕಾರಣದಿಂದ ದೊಡ್ಡ ದೊಡ್ಡ ಕಂಪನಿಗಳಲ್ಲಿ ನಡೆಯುತ್ತಿರುವ ಉದ್ಯೋಗ ಕಡಿತದ ವರದಿಗಳನ್ನು ನೀವು ಓದಿರಬಹುದು. ಇತ್ತೀಚೆಗಷ್ಟೇ ಫೇಸ್ಬುಕ್‌, ಇನ್ಸ್ಟಾಗ್ರಾಂ ಮಾತೃ ಸಂಸ್ಥೆ ಮೆಟಾ ಎರಡನೇ ಬಾರಿಗೆ 10 ಸಾವಿರ ಉದ್ಯೋಗ ಕಡಿತವನ್ನು ಘೋಷಿಸಿದೆ. ವಿಪ್ರೋ, ಅಮೇಜಾನ್‌, ಟ್ವಿಟರ್‌, ಡಿಸ್ನಿ ಹೀಗೆ ಹಲವು ಸಂಸ್ಥೆಗಳು ಉದ್ಯೋಗ ಕಡಿತಗಳನ್ನು ನಡೆಸಿವೆ. ಇದರ ಮಧ್ಯೆ ಜಾಗತಿಕ ಟೆಕ್‌ ದೈತ್ಯ ಆಪಲ್ ಈ ರೀತಿಯ ಸಾಮೂಹಿಕ ವಜಾಗೊಳಿಸುವಿಕೆ ನಡೆಸದ ಏಕೈಕ ಸಂಸ್ಥೆ ಎಂದೆನಿಸಿಕೊಂಡಿದೆ.

ಜನಪ್ರಿಯ ಆಪಲ್ ವಿಶ್ಲೇಷಕ ಮಾರ್ಕ್ ಗುರ್ಮನ್ ಪ್ರಕಾರ, ‘ಪೂರ್ಣ ಸಮಯದ ಉದ್ಯೋಗಿಗಳನ್ನು ವಜಾಗೊಳಿಸುವುದನ್ನು ತಪ್ಪಿಸಲು ಸಾಕಷ್ಟು ವೆಚ್ಚವನ್ನು ಕಡಿತಗೊಳಿಸಲು ಆಪಲ್ ಎಲ್ಲಾ ಸಾಧ್ಯತೆಗಳನ್ನೂ ಪ್ರಯತ್ನಿಸುತ್ತಿದೆ. ವಜಾಗೊಳಿಸುವುದನ್ನು ತಪ್ಪಿಸಲು ಕಂಪನಿಯು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳುತ್ತಾರೆ. ಉದಾಹರಣೆಗೆ, ಆಪಲ್ ಕಾರ್ಪೊರೇಟ್ ತಂಡಗಳಿಗೆ ಬೋನಸ್‌ಗಳನ್ನು ವಿಳಂಬಗೊಳಿಸಿದೆ. ಆ ತಂಡಗಳು ಈಗ ತಮ್ಮ ಸಂಪೂರ್ಣ ಬೋನಸ್ ಅನ್ನು ಅಕ್ಟೋಬರ್‌ನಲ್ಲಿ ಪಡೆಯಲಿದ್ದಾರೆ. ಇದಲ್ಲದೇ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ.

ಇದಲ್ಲದೆ, Apple ಕೆಲವು ತಂಡಗಳಲ್ಲಿ ನೇಮಕಾತಿಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ ಮತ್ತು ಇತರರ ನೇಮಕಾತಿಯನ್ನು ಸೀಮಿತಗೊಳಿಸಿದೆ. ಪ್ರಸ್ತುತ ಖಾಲಿ ಹುದ್ದೆಗಳನ್ನೂ ಭರ್ತಿ ಮಾಡುತ್ತಿಲ್ಲ. ಅಲ್ಲದೇ ಸಿಬ್ಬಂದಿಗಳ ವ್ಯಾಪಾರ ಪ್ರವಾಸವನ್ನೂ ಕೂಡ ಅದು ಸ್ಥಗಿತಗೊಳಿಸಿದೆ. ಹಿರಿಯ ಉಪಾಧ್ಯಕ್ಷರ ಅನುಮತಿ ಮೇರೆಗೆ ಮಾತ್ರ ವ್ಯಾಪಾರ ಪ್ರವಾಸಗಳಿಗೆ ಅನುಮತಿಸಲಾಗುತ್ತಿದೆ. ಆರ್ಥಿಕ ಪರಿಸ್ಥಿತಿಗಳನ್ನು ಎದುರಿಸಲು ಉದ್ಯೋಗ ಕಡಿತದ ಬದಲು ವೆಚ್ಚಗಳಿಗೆ ಕಡಿವಾಣ ಹಾಕಲು ಆಪಲ್‌ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೇ ಉದ್ಯೋಗಿಗಳಿಗೆ ವಿಶೇಷ ಅನಾರೋಗ್ಯದ ರಜೆಗಳನ್ನು ಕಡಿತಗೊಳಿಸಲಾಗಿದೆ. ಸಾಮಾನ್ಯ ರಜೆ ಇಲ್ಲವೇ ಸಂಬಳ ರಹಿತ ರಜೆಯನ್ನು ಪಡೆಯುವಂತೆ ಸೂಚಿಸಲಾಗುತ್ತಿದೆ.

ಚೀನಾದ ಕೋವಿಡ್‌ ಅಲೆಯಿಂದ ಆಪಲ್‌ ಭಾರೀ ಹೊಡೆತವನ್ನು ಅನುಭವಿಸಿತ್ತು. ಒಂದರ್ಥದಲ್ಲಿ ಹೇಳುವುದಾದರೆ ಇತರ ಕಂಪನಿಗಳಿಗೆ ಹೋಲಿಸಿದರೆ ದೊಡ್ಡ ಪ್ರಮಾಣದ ಉದ್ಯೋಗ ಕಡಿತಕ್ಕೆ ಆಪಲ್‌ ಬಳಿ ಸಕಾರಣಗಳಿದ್ದವು. ಆದರೆ ಆಪಲ್‌ ಉದ್ಯೋಗ ಕಡಿತವನ್ನು ತಪ್ಪಿಸಿದೆ. ಕೆಲವು ವೆಚ್ಚಕಡಿತದ ನಿರ್ಧಾರಗಳನ್ನು ಗಮನಿಸಿದರೆ ತುಂಬಾ ಕಠಿಣ ಎಂದೆನಿಸಿದರೂ ಇತರ ಕಂಪನಿಗಳ ಉದ್ಯೋಗ ಕಡಿತಕ್ಕೆ ಹೋಲಿಸಿದರೆ ಆಪಲ್‌ ನ ಈ ನಿರ್ಧಾರವನ್ನು ಶ್ಲಾಘನೀಯ ಎನ್ನಬಹುದೇನೊ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!