ಹೊಸದಿಗಂತ ವರದಿ ವಿಜಯನಗರ(ಹೊಸಪೇಟೆ):
ಬಳ್ಳಾರಿ- ವಿಜಯನಗರ ಉಭಯ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದವರು 4 ಲಕ್ಷಕ್ಕೂ ಹೆಚ್ಚು ಜನರಿದ್ದು, ಕಾಂಗ್ರೆಸ್ ವರಿಷ್ಠರು 2023ರ ವಿಧಾನಸಭೆ ಚುನಾವಣೆಯಲ್ಲಿ ಅವಳಿ ಜಿಲ್ಲೆಯ ಬಳ್ಳಾರಿ ನಗರ, ವಿಜಯನಗರ ಅಥವಾ ಹರಪನಹಳ್ಳಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಬೇಕು ಎಂದು ಅಲ್ಪಸಂಖ್ಯಾತ ಘಟಕದ ಹಡಗಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚಾಂದ್ ಸಾಹೇಬ್ ಅವರು ಒತ್ತಾಯಿಸಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಹಿಂದೆ ನಮ್ಮ ಸಮುದಾಯದವರು ವಿಧಾನಸೌಧದಲ್ಲಿ 40-45 ಶಾಸಕರು ಇರುತ್ತಿದ್ದರು. ಅದರ ಸಂಖ್ಯೆ 6-7ಕ್ಕೆ ಇಳಿದಿದೆ, ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಸಮುದಾಯದವರ ಕೊಡುಗೆ ಅಪಾರವಿದೆ, ಆದರೂ ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ. ಬಳ್ಳಾರಿ-ವಿಜಯನಗರ ಉಭಯ ಜಿಲ್ಲೆಗಳ ಹರಪನಹಳ್ಳಿ, ಬಳ್ಳಾರಿ ನಗರ ಹಾಗೂ ವಿಜಯನಗರ ಕ್ಷೇತ್ರಕ್ಕೆ ಸ್ಪರ್ದೆ ಬಯಸಿ ಸುಮಾರು ಜನರು ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ವರಿಷ್ಠರು ಮೂರರಲ್ಲಿ ಯಾವುದೇ ಕ್ಷೇತ್ರವಿರಲಿ, ಎರಡು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಬೇಕು. ಅದಾಗದಿದ್ದರೆ ಒಂದು ಕ್ಷೇತ್ರಕ್ಕಾದರೂ ಟಿಕೆಟ್ ನೀಡಲೇಬೇಕು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೇ ಸಮುದಾಯದವರಿಗೆ ಸಾಮಾಜಿಕ ನ್ಯಾಯದಡಿ ನ್ಯಾಯ ಕಲ್ಪಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಸಮುದಾಯದ ಮುಖಂಡರೊಂದಿಗೆ ಮತ್ತೋಮ್ಮೆ ಸಭೆ ನಡೆಸಿ ಹೋರಾಟದ ರೂಪುರೇಶೆಗಳನ್ನು ಸಿದ್ದಪಡಿಸಲಾಗುವುದು. ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಲು ಕಾಂಗ್ರೆಸ್ ವರಿಷ್ಠರು ಅವಕಾಶ ಕಲ್ಪಿಸಬೇಡಿ ಎಂದು ಮನವಿ ಮಾಡಿದರು.
ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಬೇಕು ಎಂದು ಈಗಾಗಲೇ ಕಾಂಗ್ರೆಸ್ ವರಿಷ್ಠರಿಗೆ ಮನವಿ ಸಲ್ಲಿಸಲಾಗಿದೆ, ಮೌಖಿಕವಾಗಿಯೂ ಮನವಿ ಮಾಡಲಾಗಿದೆ. ವಿಜಯನಗರ, ಹರಪನಹಳ್ಳಿ ಅಥವಾ ಬಳ್ಳಾರಿ ನಗರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕರಾಗಿದ್ದಾರೆ, ಆದರೂ ಸಾಕಷ್ಟು ಬಾರಿ ನಮಗೆ ಅನ್ಯಾಯವಾಗಿದೆ. ಈ ಬಾರಿಯಾದರೂ ವರಿಷ್ಠರು ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಲು ಮುಂದಾಗಬೇಕು. ನಮ್ಮ ಸಮುದಾಯದ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾದೇಹಳ್ಳಿ ನಜೀರ್ ಸಾಬ್, ಇಸ್ಮಾಯಿಲ್ ಸಾಬ್, ಹುಸೇನ್ ಪೀರಾ, ಅಜೀಜ್ ಉಲ್ಲಾ, ಪಿ.ಹಾಜೀ ಮಹ್ಮದ್, ವಾರದ ಗೌಸ್ ಮೊಹಿನುದ್ದೀನ್, ಹುಸೇನ್ ಸಾಬ್, ಉಸ್ಮಾನ್ ಕಂಪ್ಲಿ, ಪರ್ವಿನ್ ಬಾನು ಸೇರಿದಂತೆ ಇತರರಿದ್ದರು.