ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಅತಿದೊಡ್ಡ ಕಡಿಮೆ ದರದ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಎದುರಿಸುತ್ತಿರುವ ಕಾರ್ಯಾಚರಣಾ ಬಿಕ್ಕಟ್ಟು ಇದೀಗ ಹೊಸ ಹಂತಕ್ಕೇ ಬಂದಿದೆ. ಕ್ರಮೇಣ ಹೆಚ್ಚುತ್ತಿದ್ದ ವಿಮಾನ ರದ್ದು ಪ್ರಕರಣಗಳು ದೇಶಾದ್ಯಂತ ಪ್ರಯಾಣಿಕರಲ್ಲಿ ಆಕ್ರೋಶ ಮತ್ತು ಗೊಂದಲ ಉಂಟುಮಾಡುತ್ತಿದ್ದಂತೆಯೇ, ತನಿಖೆ ನಡೆಸುತ್ತಿದ್ದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಾಲ್ವರು ವಿಮಾನ ಕಾರ್ಯಾಚರಣೆ ಇನ್ಸ್‌ಪೆಕ್ಟರ್‌ರನ್ನು ವಜಾಗೊಳಿಸಿದೆ.
ಇಂಡಿಗೋ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮತ್ತು ಸುರಕ್ಷತಾ ಪರಿಶೀಲನೆಗೆ ನೇರವಾಗಿ ಜವಾಬ್ದಾರರಾಗಿದ್ದ ಈ ಅಧಿಕಾರಿಗಳ ನಿರ್ಲಕ್ಷ್ಯವೇ ಸಮಸ್ಯೆ ಗಂಭೀರಗೊಂಡ ಹಿನ್ನೆಲೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಇಂಡಿಗೋ ಅನೇಕ ವಿಮಾನಗಳನ್ನು ಕೊನೆ ಕ್ಷಣಗಳಲ್ಲಿ ರದ್ದುಪಡಿಸಿದ್ದರಿಂದ, ಸಾವಿರಾರು ಪ್ರಯಾಣಿಕರು ತಮ್ಮ ಕಾರ್ಯಕ್ರಮಗಳು, ಮದುವೆಗಳು ಮತ್ತು ತುರ್ತು ಪ್ರಯಾಣಗಳನ್ನು ಕೈಚೆಲ್ಲುವಂತಾಗಿತ್ತು. ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ವಿಶೇಷ ಮೇಲ್ವಿಚಾರಣಾ ತಂಡವನ್ನು ರಚಿಸಿ ಪ್ರಕರಣದ ಸಂಪೂರ್ಣ ತನಿಖೆಗೆ ಆದೇಶಿಸಿತ್ತು.
ಶುಕ್ರವಾರ ಬೆಂಗಳೂರು ವಿಮಾನ ನಿಲ್ದಾಣದಿಂದ 50 ಕ್ಕೂ ಹೆಚ್ಚು ವಿಮಾನಗಳನ್ನು ವಿಮಾನಯಾನ ಸಂಸ್ಥೆ ರದ್ದುಗೊಳಿಸಿದೆ.

