ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ನ ವಲ್ಸದ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದು ಐವರು ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಔರಂಗೇ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆ 9.15ರ ಸುಮಾರಿಗೆ ದಿಢೀರ್ ಕುಸಿದಿದೆ. ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ ಐವರು ಕಾರ್ಮಿಕರು ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಪಿ ಯುವರಾಜ್ ಸಿನ್ಹ್ ಜಡೇಜಾ ತಿಳಿಸಿದರು.
ಅಗ್ನಿಶಾಮಕದಳ ಅವಶೇಷಗಳ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಸೇತುವೆ ಕುಸಿಯಲು ಕಾರಣವೇನು ಎಂಬ ಕುರಿತು ತನಿಖೆ ನಡೆಸಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ.
ವಲ್ಸದ್ ಜಿಲ್ಲಾಧಿಕಾರಿ ಭವ್ಯ ವರ್ಮಾ ಅವರು ಮಾತನಾಡಿ, ಗಾಯಗೊಂಡ ಐವರಲ್ಲಿ ನಾಲ್ವರು ಕಾರ್ಮಿಕರ ಆರೋಗ್ಯ ಸ್ಥಿರವಾಗಿದೆ. ಒಬ್ಬರನ್ನು ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ. ಸೇತುವೆಗೆ ಸ್ಲ್ಯಾಬ್ ಹಾಕುವುದಕ್ಕೆ ಮೊದಲು ಮಾಡುವ ಗಿರ್ಡರ್‌ಗಾಗಿ ನೆಲದ ಮಟ್ಟದಲ್ಲಿ ಲೋಡ್ ಬ್ಯಾಲೆನ್ಸಿಂಗ್ ಕೆಲಸದಲ್ಲಿ ಅವರು ಕೆಲಸ ಮಾಡುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ರಸ್ತೆ ಮತ್ತು ಕಟ್ಟಡ ಇಲಾಖೆ ವಿವರವಾಗಿ ತನಿಖೆ ನಡೆಸಿ ನಿಖರ ಕಾರಣವನ್ನು ಪತ್ತೆ ಮಾಡಲಿದೆ ಎಂದು ಮಾಹಿತಿ ನೀಡಿದರು.ರೆ.

