ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ತೆರಳುವ ಅಯ್ಯಪ್ಪ ಭಕ್ತರಿಗೆ ಮೋದಿ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ದೇವಸ್ಥಾನಕ್ಕೆ (Sabarimala temple) ಸಮೀಪವಿರುವ ಕೊಟ್ಟಾಯಂ ಜಿಲ್ಲೆಯಲ್ಲಿ ಹೊಸ ‘ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ‘ (Greenfield Airport) ಯೋಜನೆಗೆ ನಾಗರಿಕ ವಿಮಾನಯಾನ ಸಚಿವಾಲಯ (MoCA) ಸೋಮವಾರ ಅನುಮತಿ ನೀಡಿದೆ.
ಈ ಮೂಲಕ ಶಬರಿಮಲೆಯ ಅಯ್ಯಪ್ಪನ ದೇಗುಲಕ್ಕೆ ಭೇಟಿ ನೀಡಲು ಕೇರಳಕ್ಕೆ ಬರುವ ಸಾವಿರಾರು ಭಕ್ತರಿಗೆ ಪ್ರಯೋಜನಕಾರಿಯಾಗಲಿದೆ.
ಸಚಿವಾಲಯ ಮತ್ತು ಯೋಜನಾ ಪ್ರಧಿಕಾರ, ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (KSIDC) ನಡುವಿನ ಬಹು ಸುತ್ತಿನ ಚರ್ಚೆಗಳ ನಂತರ ಯೋಜನೆಗೆ ಅನುಮತಿ ದೊರೆತಿದೆ. ಈ ಯೋಜನೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದ್ದು, ಈ ವಿಮಾನ ನಿಲ್ದಾಣವು ಬೇರೆ ಬೇರೆ ರಾಜ್ಯಗಳಿಗೆ ಹೆಚ್ಚಿನ ಸಂಪರ್ಕವನ್ನು ಸಾಧಿಸುತ್ತದೆ ಮತ್ತು ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಸಚಿವಾಲಯ ಹೇಳಿದೆ.
ಯೋಜನೆಗೆ 2,250 ಎಕರೆ ಭೂಮಿಯನ್ನು ಈಗಾಗಲೇ ನಿಗದಿ ಮಾಡಿದ್ದು, ಈ ವಿಮಾನ ನಿಲ್ದಾಣಕ್ಕೆ ಅಂದಾಜು 4,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಲಾಗಿದೆ.
ಹೊಸ ವಿಮಾನ ನಿಲ್ದಾಣದ ಕುರಿತು ಈಗಾಗಲೇ ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಟಣೆಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಈ ಟ್ವೀಟ್ನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರೀ ಟ್ವೀಟ್ ಮಾಡಿಕೊಂಡಿದ್ದಾರೆ. ಇದು ಪ್ರವಾಸೋದ್ಯಮಕ್ಕೆ, ವಿಶೇಷವಾಗಿ ಶರಿಮಲೆ ಭಕ್ತರಿಗೆ ಹಾಗೂ ದೇವರ ನಾಡಿನ ಬೇರೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರಿಗೆ “ಉತ್ತಮ ಸುದ್ದಿ” ಎಂದು ಬರೆದುಕೊಂಡಿದ್ದಾರೆ.
Great news for tourism and especially spiritual tourism. https://t.co/Adk1MIUMN1
— Narendra Modi (@narendramodi) April 18, 2023