ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೃದುವಾದ ರೊಟ್ಟಿ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಾಗಾದ್ರೆ ಈ ರೊಟ್ಟಿಯನ್ನು ಹೇಗೆ ಮಾಡುವುದು ನೋಡೋಣ.
ಬೇಕಾಗುವ ಸಾಮಾಗ್ರಿ:
2ಕಪ್ಗೋದಿ ಹಿಟ್ಟು, ಅರ್ಧ ಕಪ್ಮೈದಾ ಹಿಟ್ಟು, ಒಂದು ಟೇಬಲ್ಸ್ಪೂನ್ತುಪ್ಪ, ಅರ್ಧ ಕಂತೆ ಪುದೀನ, ಐದರಿಂದ ಆರು ಹಸಿಮೆಣಸು, ರುಚಿಗೆ ಬೇಕಾದಷ್ಟು ಉಪ್ಪು, ಸ್ವಲ್ಪ ಹುಣಸೆಹಣ್ಣು, ಇಂಗು, ಸಣ್ಣ ತುಂಡು ಬೆಲ್ಲ, ಒಂದು ಸೌಟು ತೆಂಗಿನೆಣ್ಣೆ, ಒಗ್ಗರಣೆಬೇಕಾದ ಸಾಸಿವೆ, ಕರಿಬೇವು, ಒಣಮೆಣಸು.
ತಯಾರಿಸುವ ವಿಧಾನ:
ಗೋಧಿ ಹಿಟ್ಟಿಗೆ ಮೈದಾ, ಉಪ್ಪು, ಕಾಯಿಸಿದ ತುಪ್ಪ ಸೇರಿಸಿ ನೀರು ಚಿಮುಕಿಸಿ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ತುಪ್ಪದ ಜಿಡ್ಡಿನಲ್ಲಿ ಮತ್ತೆ ಮತ್ತೆ ಚೆನ್ನಾಗಿ ನಾದಿಕೊಳ್ಳಿ, ಇದರ ಮೇಲೆ ತೆಳುವಾದ ಒದ್ದೆ ಬಟ್ಟೆ ಹಾಸಿ ನೆನೆಯಲು ಬಿಡಿ.
ಪುದೀನಾ ಸೊಪ್ಪನ್ನು ಶುಚಿಗೊಳಿಸಿ ನೀರಿನಂಶ ಸೋರಿಹೋಗುವಂತೆ ಮಾಡಿ. ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿಮಾಡಿಕೊಂಡು ಮೊದಲು ಹಸಿ ಮೆಣಸಿನ ಕಾಯಿ ಬಾಡಿಸಿ ತೆಗೆದುಬಿಡಿ. ಅದರಲ್ಲೇ ಪುದೀನಾ ಸೊಪ್ಪನ್ನು ಬಾಡಿಸಿಕೊಳ್ಳಿ. ಅಗತ್ಯವಿದ್ದಷ್ಟು ಉಪ್ಪು, ಹುಣಸೆಹಣ್ಣು, ಬೆಲ್ಲ ಸೇರಿಸಿ ಒರಳಲ್ಲಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ರುಬ್ಬುವ ಸಂದರ್ಭ ನೀರು ಬಳಸಬೇಡಿ. ಬಾಣಲೆಯಲ್ಲಿ ಐದು ಚಮಚ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಜೀರಿಗೆ, ಇಂಗು ಕರಿಬೇವಿನ ಒಗ್ಗರಣೆ ನೀಡಿ. ರುಬ್ಬಿದ ಮಿಶ್ರಣವನ್ನು ಹಾಕಿ ಸುವಾಸನೆ ಸೂಸುವ ತನಕ ಮಂದ ಉರಿಯಲ್ಲಿ ಬಾಡಿಸಿ ಕೆಳಗಿಡಿ. ಈ ಚಟ್ನಿ ಒಂದು ವಾರದ ವೆರೆಗೂ ಕೆಡದೆ ಉಳಿಯುತ್ತದೆ.
ನೆನೆಯಲು ಇಟ್ಟ ಗೋಧಿ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಸಾಧ್ಯವಾದಷ್ಟು ತೆಳ್ಳಗೆ ಲಟ್ಟಿಸಿ. ಎರಡೂ ಬದಿಗೆ ತುಪ್ಪ ಸವರಿಕೊಂಡು ಮಡಚಿ ಮತ್ತೆ ಲಟ್ಟಿಸಿಕೊಳ್ಳಿ. ನಂತರ ಕಾವಲಿಯ ಮೇಲೆ ಹಾಕಿ ಎಣ್ಣೆ ಬಿಡುತ್ತಾ ಎರಡೂ ಬದಿಯಲ್ಲಿ ಬೇಯಿಸಿ. ಇದೀಗ ಬಿಸಿ ಬಿಸಿ ಮೃದು ರೊಟ್ಟಿ ರೆಡಿ. ಪುದೀನಾ ಚಟ್ನಿಯೊಂದಿಗೆ ಸೇವಿಸಲು ಕೊಡಿ.