ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಭ್ರಮ, ಸಂಪ್ರದಾಯ ಮತ್ತು ಸಂಬಂಧಗಳ ನಡುವೆ ನಡೆಯಬೇಕಿದ್ದ ಮದುವೆ ಕ್ಷಣಾರ್ಧದಲ್ಲಿ ಮುರಿದು ಬಿದ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ತಾಳಿ ಕಟ್ಟುವ ಹೊತ್ತಿನಲ್ಲಿ ವರನ ಕಡೆಯಿಂದ ಹೆಚ್ಚುವರಿ ವರದಕ್ಷಿಣೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ, ವಧುವೇ ಮದುವೆಯನ್ನು ರದ್ದುಪಡಿಸಿರುವುದು ಎಲ್ಲರ ಗಮನ ಸೆಳೆದಿದೆ.
ಶುಕ್ರವಾರ ನಿಗದಿಯಾಗಿದ್ದ ವಿವಾಹಕ್ಕೆ ವರ ಮೆರವಣಿಗೆ ಆಗಮಿಸಿತ್ತು. ಪೂಜಾ ವಿಧಿವಿಧಾನಗಳೆಲ್ಲಾ ಮುಗಿದು, ಮಂಟಪದಲ್ಲಿ ತಾಳಿ ಕಟ್ಟುವ ಕ್ಷಣ ಹತ್ತಿರವಾಗುತ್ತಿದ್ದಂತೆ, ವರ ಬ್ರೀಝಾ ಕಾರು ಹಾಗೂ 20 ಲಕ್ಷ ರೂಪಾಯಿ ಹಣ ನೀಡಬೇಕು ಎಂದು ಪಟ್ಟು ಹಿಡಿದಿದ್ದಾನೆ. ಈ ಬೇಡಿಕೆ ಪೂರೈಸದಿದ್ದರೆ ಮದುವೆ ನಡೆಯುವುದಿಲ್ಲ ಎಂದು ವರ ಸ್ಪಷ್ಟವಾಗಿ ಹೇಳಿದ್ದರಿಂದ, ವಧುವಿನ ಕುಟುಂಬ ಆತಂಕಕ್ಕೆ ಒಳಗಾಯಿತು. ಮಾತುಕತೆ ಗೊಂದಲಕ್ಕೆ ತಿರುಗಿ, ಕೊನೆಗೆ ಪೊಲೀಸರನ್ನೂ ಸ್ಥಳಕ್ಕೆ ಕರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಈ ಎಲ್ಲ ಸಂದರ್ಭವನ್ನು ಕಂಡ ವಧು, ತನ್ನ ಕುಟುಂಬವನ್ನು ಸಾರ್ವಜನಿಕವಾಗಿ ಅವಮಾನಿಸಿದ ವ್ಯಕ್ತಿಯೊಂದಿಗೆ ಜೀವನ ಆರಂಭಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿ ಮದುವೆಯನ್ನು ಮುಂದುವರಿಸಲು ನಿರಾಕರಿಸಿದಳು. ವರದಕ್ಷಿಣೆ ದುರಾಸೆಯೇ ಪ್ರಮುಖ ಕಾರಣ ಎಂದು ಆಕೆ ತಿಳಿಸಿದ್ದು, ಈ ನಿರ್ಧಾರಕ್ಕೆ ಕುಟುಂಬವೂ ಬೆಂಬಲ ನೀಡಿದೆ.
ಪೊಲೀಸರು ವರ ಮತ್ತು ಆತನ ಸಂಬಂಧಿಕನನ್ನು ವಶಕ್ಕೆ ಪಡೆದರೂ, ವಧುವಿನ ಕಡೆಯಿಂದ ಅಧಿಕೃತ ದೂರು ದಾಖಲಾಗಿಲ್ಲ. ಈ ಜೋಡಿ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈಗಾಗಲೇ ವಧುವಿನ ಕುಟುಂಬವು ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದೆ ಎನ್ನಲಾಗಿದೆ. ವರದಕ್ಷಿಣೆ ವಿರುದ್ಧ ವಧುವಿನ ಧೈರ್ಯಮಯ ನಿಲುವು ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.

