ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಶಿವರಾಜ್ ಕುಮಾರ್ (Shiva Rajkumar) ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಈ ಕುರಿತು ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ರಾಘವೇಂದ್ರ ಸ್ಟೋರ್ಸ್ ಸಿನಿಮಾ ವೀಕ್ಷಸಿ ಸಿನಿಮಾದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಘವೇಂದ್ರ ರಾಜ್ಕುಮಾರ್ ಅವರು ಗೀತಾ ಶಿವರಾಜ್ ಕುಮಾರ್ ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರಶ್ನೆ ಕೇಳಿದಾಗ ಮಾತನಾಡಿದರು. ‘ಗೀತಾ ಶಿವರಾಜ್ಕುಮಾರ್ ಅವರು ನನ್ನ ಅತ್ತಿಗೆ, ಶಿವರಾಜ್ ಕುಮಾರ್ ಅವರು ನನಗೆ ಅಣ್ಣ ನನಗೆ ಇಷ್ಟು ಮಾತ್ರವೇ ಗೊತ್ತು, ನನಗೆ ಇಷ್ಟು ಮಾತ್ರವೇ ಮುಖ್ಯ. ಇನ್ಯಾವುದು ನನ್ನದಲ್ಲ, ಇದು ಎರಡು ಬಿಟ್ಟರೆ ಬೇರೆ ಯಾವುದೂ ನನಗೆ ಗೊತ್ತಿಲ್ಲ. ಅವರು ನನಗೆ ಅಣ್ಣ-ಅತ್ತಿಗೆ ಅಷ್ಟೆ ನನಗೆ ಸಂಬಂಧ ಇದೆ ಇನ್ಯಾವುದೂ ಅಲ್ಲ’ ಎಂದು ಮಾರ್ಮಿಕವಾಗಿ ನುಡಿದರು.
ಅವರು ನನಗೆ ಅಣ್ಣ-ಅತ್ತಿಗೆ ಅದರ ಹೊರತಾಗಿ ಅವರ ವೈಯಕ್ತಿಕ ನಿರ್ಧಾರಗಳನ್ನು ಪ್ರಶ್ನಿಸುವುದಾಗಲಿ, ಅದರ ಬಗ್ಗೆ ಅಭಿಪ್ರಾಯ ಪ್ರಕಟಿಸುವುದಾಗಲಿ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಈ ಹಿಂದೆ ಗೀತಾ ಶಿವರಾಜ್ಕುಮಾರ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಪುನೀತ್ ರಾಜ್ಕುಮಾರ್ ಅವರು ಚುನಾವಣಾ ಪ್ರಚಾರಕ್ಕೆ ಹೋಗಿರಲಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.