ಹೊಸದಿಗಂತ ಡಿಜಿಟಲ್ ಡೆಸ್ಕ್:
‘ದಿ ಕೇರಳ ಸ್ಟೋರಿ’ ಸಿನಿಮಾ ನಿನ್ನೆಯಷ್ಟೇ ರಿಲೀಸ್ ಆಗಿದೆ.ಬಾಕ್ಸ್ ಆಫೀಸಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೇಶದಾದ್ಯಂತ ದಿನದ ಗಳಿಕೆ 7-8 ಕೋಟಿ ಎಂದು ಅಂದಾಜಿಸಲಾಗಿದೆ.
ಇದೀಗ ಈ ಸಿನಿಮಾವನ್ನು ಎಲ್ಲರಿಗೂ ತಲುಪಿಸಬೇಕು ಎನ್ನುವ ಕಾರಣಕ್ಕಾಗಿ ಮಧ್ಯಪ್ರದೇಶ ಸರಕಾರವು ತೆರಿಗೆ ವಿನಾಯತಿ (Tax Exemption) ಘೋಷಣೆ ಮಾಡಿದೆ.
ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಬೇಕೆಂದು ಮಧ್ಯ ಪ್ರದೇಶದ ಕೆಲವು ಹಿಂದುಪರ ಸಂಘಟನೆಗಳು, ಬಿಜೆಪಿಯು ತಮ್ಮದೇ ಪಕ್ಷದ ಸಿಎಂ ಅವರನ್ನು ಒತ್ತಾಯಿಸಿದ್ದವು. ಇದೀಗ ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ವಿಡಿಯೋ ಒಂದನ್ನು ಪ್ರಕಟಿಸಿದ್ದು, ದಿ ಕೇರಳ ಸ್ಟೋರಿ ಸಿನಿಮಾವನ್ನು ಹೊಗಳಿರುವುದಲ್ಲದೆ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
‘ದಿ ಕೇರಳ ಸ್ಟೋರಿ’ ಸಿನಿಮಾವು ಲವ್ ಜಿಹಾದ್, ಮತಾಂತರ, ಭಯೋತ್ಪಾದಕತೆಯ ಷಡ್ಯಂತ್ರವನ್ನು ಬಯಲಿಗೆಳೆಯುತ್ತದೆ, ಇವುಗಳ ಕೆಟ್ಟ ಮುಖವನ್ನು ಬಹಿರಂಗಗೊಳಿಸುವ ಸಿನಿಮಾ ಆಗಿದೆ. ಕ್ಷಣಿಕ ಭಾವುಕತೆಯಲ್ಲಿ, ಹೆಣ್ಣು ಮಕ್ಕಳು ಲವ್ ಜಿಹಾದ್ ಜಾಲದಲ್ಲಿ ಸಿಲುಕಿದರೆ ಅವರ ಜೀವನ ಹೇಗೆ ಹಾಳಾಗಿ ಹೋಗುತ್ತದೆ ಎಂಬುದನ್ನು ಈ ಸಿನಿಮಾ ತೋರಿಸುತ್ತದೆ. ಭಯೋತ್ಪಾದನೆಯ ವಿನ್ಯಾಸಗಳು ವಿವಿಧ ಮುಖಗಳು ಹೇಗಿರುತ್ತವೆ ಎಂಬುದನ್ನೂ ಈ ಸಿನಿಮಾ ತೋರಿಸಿಕೊಡುತ್ತದೆ. ಈ ಸಿನಿಮಾ ನಮ್ಮನ್ನು ಜಾಗರೂಕಗೊಳಿಸುತ್ತದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಮಧ್ಯ ಪ್ರದೇಶದಲ್ಲಿ ಈಗಾಗಲೇ ನಮ್ಮ ಸರ್ಕಾರವು ಮತಾಂತರಣದ ವಿರುದ್ಧ ಕಾನೂನು ಮಾಡಿದ್ದೇವೆ. ಆದರೆ ಈ ಸಿನಿಮಾ ಜನರಲ್ಲಿ ಜಾಗೃತಿ ಮೂಡಿಸುತ್ತದೆ ಹಾಗಾಗಿ ಈ ಸಿನಿಮಾವನ್ನು ಎಲ್ಲರೂ ನೋಡಬೇಕಿದೆ. ಪಾಲಕರೂ ಈ ಸಿನಿಮಾ ನೋಡಬೇಕು, ಮಕ್ಕಳೂ ಸಹ ಈ ಸಿನಿಮಾ ನೋಡಬೇಕು. ಹೆಣ್ಣು ಮಕ್ಕಳು ಸಹ ಸಿನಿಮಾ ನೋಡಬೇಕು ಹಾಗಾಗಿ ಈ ಸಿನಿಮಾಕ್ಕೆ ಮಧ್ಯ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂದರು.
ನಿನ್ನೆಯಷ್ಟೆ ಪ್ರಧಾನಿ ನರೇಂದ್ರ ಮೋದಿಯವರು ಸಹ ಕರ್ನಾಟಕದ ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ದಿ ಕೇರಳ ಸ್ಟೋರಿ ಸಿನಿಮಾದ ವಿಷಯವಾಗಿ ಮಾತನಾಡಿದ್ದರು.