ಪುತ್ತೂರಿನಲ್ಲಿ ಯೋಗಿ ಆದಿತ್ಯನಾಥ್ ಮತಬೇಟೆ: ಕನ್ನಡದಲ್ಲೇ ಭಾಷಣ ಆರಂಭಿಸಿದ ಯುಪಿ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗುತ್ತಿದ್ದು, ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸಿದ್ದು, ಬಿಜೆಪಿ ಅಭ್ಯರ್ಥಿ ಪರ ಬೃಹತ್ ರೋಡ್ ಶೋ
ನಡೆಸಿದರು.

ಈ ವೇಳೆ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಪುತ್ತೂರಿನ ಮುತ್ತಿನಂತ ಜನರಿಗೆ ನನ್ನ ನಮಸ್ಕಾರಗಳು. ಪುತ್ತೂರಿನವರೆಲ್ಲರಿಗೂ ಹೃದಯದಿಂದ ಅಭಿನಂದನೆಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.

ನಾನು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿ ಉತ್ತರ ಪ್ರದೇಶದಿಂದ ಹನುಮಂತನ ಜನ್ಮಭೂಮಿಯಾದ ಕರ್ನಾಟಕಕ್ಕೆ ಬಂದಿದ್ದೇನೆ. ಕರ್ನಾಟಕ ಹಾಗೂ ಉತ್ತರ ಪ್ರದೇಶಕ್ಕೆ ಅವಿನಾಭಾವ ಸಂಬಂಧವಿದೆ. ಒಂದೇ ಭಾರತ ಶ್ರೇಷ್ಠ ಭಾರತ ನಮ್ಮ ಕಲ್ಪನೆ. ಆದ್ರೆ ಕಾಂಗ್ರೆಸ್ ನವರಿಗೆ ಶ್ರೇಷ್ಠ ಭಾರತ ಇಷ್ಟ ಇಲ್ಲ. ನಾವು ಪಿಎಫ್‌ಐಯನ್ನು ಬ್ಯಾನ್ ಮಾಡಿದ್ದೇವೆ. ಆದರೆ ಹನುಮಾನ್ ಪೂಜಿಸುವ ಬಜರಂಗದಳ ಬ್ಯಾನ್ ಮಾಡುವ ಮಾತು ಕಾಂಗ್ರೆಸ್ ಆಡುತ್ತಿದೆ. ಆದರೆ ಈ ಮಾತುಗಳನ್ನು ಇಂದು ಸಮಾಜ ಸ್ವೀಕರಿಸುವುದಿಲ್ಲ ಎಂದರು.

ಸಾವಿರ ವರ್ಷದ ಹಿಂದೆ ರಾಮನ ವನವಾಸದ ಸಮಯದಲ್ಲಿ ರಾಮನ ಅಂತಿಮ ದಿನದವರೆಗೆ ಇದ್ದವನು ಹನುಮಂತ. ಇದು ಆಂಜನೇಯನ ಪುಣ್ಯ ಭೂಮಿ. ಈ ನಾಡಿನಲ್ಲಿ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ಜನರ ನಂಬಿಕೆಯ ಮೇಲೆ ಪ್ರಹಾರ ಮಾಡುತ್ತಿದೆ. ಬಜರಂಗದಳ ದೇಶದ ಸಾಂಸ್ಕೃತಿಕ ಸಂಘಟನೆ.ದೇಶದ ಸಂಸ್ಕೃತಿಯ ಜೊತೆ ಬೆಸೆದುಕೊಂಡಿರುವ ಕೊಂಡಿರುವ ಸಂಘಟನೆ. ಹಾಗಾಗಿ ಯಾರಿಂದಲೂ ಬಜರಂಗದಳವನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ. ಬಜರಂಗಬಲಿ ಮಹಾಪುರುಷ ಎಂದ ಯೋಗಿ ಆದಿತ್ಯನಾಥ್, ಎಲ್ಲರೂ ನನ್ನ ಜೊತೆ ಜೈಕಾರ ಹಾಕಿ ಎಂದು ಹರ ಹರ ಮಹದೇವ್, ಜೈ ಭಜರಂಗಬಲಿ, ಜೈ ಭಜರಂಗಬಲಿ ಎಂದು ಜೈಕಾರ ಹಾಕಿದ್ದಾರೆ.

ಭಾರತ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿದೆ. ಅದು ಮೋದಿ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಶ್ಯಕತೆ ಇದೆ. ಮೋದಿಜಿ ನೇತೃತ್ವದಲ್ಲಿ ಭಾರತ ಮುನ್ನುಗುತ್ತಿದೆ. ಕೋವಿಡ್‌ ಸಮಯದಲ್ಲಿ ಡಬಲ್ ಇಂಜಿನ್ ಸರ್ಕಾರ ಜನರೊಂದಿಗೆ ನಿಂತಿದೆ. 120 ಕೋಟಿ ವ್ಯಾಕ್ಸಿನ್ ಉಚಿತ ನೀಡಿದ್ದೇವೆ. ಕಾಂಗ್ರೆಸ್ ಜೆಡಿಎಸ್ ಕರ್ನಾಟಕಕ್ಕೆ ಏನು ಮಾಡಿದೆ. ರಾಜ್ಯದಲ್ಲಿ ಆರಾಜಕತೆ ಸೃಷ್ಟಿ ಮಾಡಿವೆ. ಯಡಿಯೂರಪ್ಪ ಮಾರ್ಗದರ್ಶನ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ಅಚ್ಚು ಕಟ್ಟಾಗಿ ನಡೆದಿದೆ. ಡಬಲ್ ಇಂಜಿನ್ ಸರ್ಕಾರ ಇರುವುದರಿಂದ ಇಂದು ಅಭಿವೃದ್ಧಿ ಸಾಧ್ಯವಾಗಿದೆ ಎಂದರು.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ಜನವರಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದೆ. ಪ್ರಧಾನಿ ಮೋದಿ ಈ ಕಾರ್ಯಕ್ರಮ ನೆರವೇರಿಸಲಿದ್ದಾರೆ. ನಾನು ಬಜರಂಗ ಬಲಿ ಹಾಗೂ ಕರ್ನಾಟಕದ ಜನತೆಯನ್ನು ಸ್ವಾಗತ ಮಾಡುತ್ತಿದ್ದೇನೆ ಎಂದು ಹೇಳಿದರು.

ಟೀಂ ಇಂಡಿಯಾದ ಲೀಡರ್ ಆದ ಮೋದಿ ಜೊತೆ ಕರ್ನಾಟಕ ರಾಜ್ಯದ ಜನತೆ ನಿಲ್ಲಬೇಕಿದೆ. ರಾಜ್ಯದಲ್ಲಿ ಮತ್ತೆ ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವಾದ ಮಾಡಬೇಕಿದೆ. ಹೀಗಾಗಿ ಪುತ್ತೂರಿನ ಜನತೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಜೊತೆ ಕೈಜೋಡಿಸಬೇಕು ಎಂದು ಜನರಲ್ಲಿ ಮತಯಾಚಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!