ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭದ್ರತಾ ವೈಫಲ್ಯ ಮತ್ತೊಮ್ಮೆ ಬಹಿರಂಗವಾಗಿದೆ. ಬಿಗಿ ಬಂದೋಬಸ್ತ್ ನಡುವೆಯೂ ಭಕ್ತರೊಬ್ಬರು ಶ್ರೀವಾರಿ ಗರ್ಭಗುಡಿಗೆ ಮೊಬೈಲ್ ಕೊಂಡೊಯ್ದಿರುವುದು ವಿವಾದಕ್ಕೀಡಾಗಿದೆ. ಈ ಘಟನೆಯಿಂದ ಶ್ರೀವಾರಿ ದೇವಸ್ಥಾನದ ಸುರಕ್ಷತೆ ಬಗ್ಗೆ ಭಕ್ತರು ಆತಂಕಗೊಂಡಿದ್ದಾರೆ.
ಭಾನುವಾರ (ಮೇ 7, 2023), ಭಕ್ತರೊಬ್ಬರು ಶ್ರೀವಾರಿ ಆನಂದ ನಿಲಯಕ್ಕೆ ಮೊಬೈಲ್ ತೆಗೆದುಕೊಂಡು ಹೋಗಿ ಗರ್ಭಗುಡಿಯಿಂದ ಹೆಚ್ಚು ಹತ್ತಿರದಿಂದಲೇ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಂಡರು. ಅಲ್ಲಿಗೆ ನಿಲ್ಲದೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಇದರಿಂದಾಗಿ ಈ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದು, ಭಕ್ತರು ಟಿಟಿಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇನಾ ಸ್ವಾಮಿ ದೇವಸ್ಥಾನದ ಭದ್ರತೆ ಎಂದು ಪ್ರಶ್ನಿಸುತ್ತಿದ್ದಾರೆ.
ಶ್ರೀವಾರಿ ದೇವಸ್ಥಾನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಹಲವಾರು ಹಂತಗಳಲ್ಲಿ, ಭಕ್ತರನ್ನು ಪರೀಕ್ಷಿಸಿ ಒಳಗೆ ಕಳುಹಿಸಲಾಗುತ್ತದೆ. ಭಕ್ತರು ಈ ಭದ್ರತಾ ರೇಖೆಗಳನ್ನು ದಾಟಿ ಸೆಲ್ ಫೋನ್ ತೆಗೆದುಕೊಂಡರೆ ಅದು ಭದ್ರತಾ ವೈಫಲ್ಯ ಖಂಡಿತ. ಇಲ್ಲಿ ವ್ಯಕ್ತಿಯೊಬ್ಬರು ಸೆಲ್ ಫೋನ್ ಹಿಡಿದು ಗರ್ಭಗುಡಿಗೆ ಹೋಗಿದ್ದಲ್ಲದೆ ಅಲ್ಲಿ ಫೋಟೋ, ವೀಡಿಯೋ ತೆಗೆದರೂ ಭದ್ರತಾ ಸಿಬ್ಬಂದಿ ಕ್ಯಾರೇ ಎನ್ನದಿರುವುದು ಸ್ಪಷ್ಟವಾಗಿದೆ. ಶ್ರೀವಾರಿ ಆನಂದ ನಿಲಯವನ್ನು ಹೊರಗಿನಿಂದ ವಿಡಿಯೋ ಮಾಡಿದ್ದರೂ ಸಿಬ್ಬಂದಿ ಗಮನಹರಿಸದಿರುವುದು ಹಲವು ಟೀಕೆಗಳಿಗೆ ಕಾರಣವಾಯಿತು.
ಈ ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ತಿರುಮಲ ವಿಜಿಲೆನ್ಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಭಕ್ತರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.