ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲು ಮುಂದಾಗಿದೆ. ಈ ಬೆನ್ನಲ್ಲೇ ವಿವಿಧ ಸಮುದಾಯಗಳು ತಮ್ಮ ತಮ್ಮ ನಾಯಕರಿಗೆ ಉನ್ನತ ಸ್ಥಾನಕ್ಕಾಗಿ ಪೈಪೋಟಿಗಿಳಿದಿದ್ದು, ಲಿಂಗಾಯತ, ದಲಿತ, ಮುಸ್ಲಿಂ ಸಮುದಾಯದ ಕಾರ್ಯಕರ್ತರಿಂದ ಡಿಸಿಎಂ ಹುದ್ದೆಗೆ ಪೈಪೋಟಿ ಹೆಚ್ಚಿತ್ತು. ಈ ಬಗ್ಗೆ ಎಂ.ಬಿ.ಪಾಟೀಲ್ ಮಾತನಾಡಿದ್ದು, ಪಕ್ಷ ಎಲ್ಲರಿಗೂ ಸಮಾನವಾದ ಪಾಲನ್ನು ನೀಡಲಿದೆ ಎಂದರು.
ಲಿಂಗಾಯತ ಸಮುದಾಯದ ತಮಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಪ್ರಶ್ನೆಗೆ ಕರ್ನಾಟಕದ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದು, ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಲಿಂಗಾಯತರನ್ನು ತಿರಸ್ಕರಿಸಲಾಗಿದೆ. ಹಾಗಾಗಿ ಸಹಜವಾಗಿಯೇ ನಾವು ಕಾಂಗ್ರೆಸ್‌ನತ್ತ ಬಂದಾಗ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಪಕ್ಷ ನಮ್ಮನ್ನು ನೋಡಿಕೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.
ಜಿ ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ದಲಿತ ಸಮುದಾಯದ ಬೇಡಿಕೆಯ ಕುರಿತು ಮಾತನಾಡಿದ ಅವರು, ‘ಲಿಂಗಾಯತರು, ದಲಿತರು, ಒಕ್ಕಲಿಗರು, ಎಸ್‌ಟಿಗಳು, ಮುಸ್ಲಿಮರು ಯಾರಿಗೆ ಮತ ಹಾಕಿದರೂ ಅವರಿಗೆಲ್ಲ ಅವರ ಪಾಲನ್ನು ನೀಡಲಾಗುತ್ತದೆ. ನಮ್ಮ ಪಕ್ಷವು ಅದೇ ರೀತಿ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ. ಈ ಎಲ್ಲಾ ಸಮುದಾಯಗಳಿಗೆ ಸರಿಯಾದ ಗೌರವವನ್ನು ನೀಡುತ್ತಾರೆ ಮತ್ತು ಎಲ್ಲಾ ಸಮುದಾಯಗಳಿಗೂ ಸಮಾನವಾದ ಅಧಿಕಾರ ಹಂಚಿಕೆ ಮಾಡುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.