ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆ ಆರಂಭಕ್ಕೂ ಮುನ್ನವೇ ಪಠ್ಯ ಪರಿಷ್ಕರಣೆ ವಿಷಯ ಮುನ್ನೆಲೆಗೆ ಬಂದಿದೆ. ಈ ಹಿಂದೆ ಬಿಜೆಪಿ ಸರ್ಕಾರ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯ ಪರಿಶೀಲನೆಗೆ ಸಮಿತಿ ರಚಿಸಿ, ಪಠ್ಯವನ್ನು ಪುನರ್ ಪರಿಷ್ಕರಿಸಿತ್ತು.
ಆಗ ಟಿಪ್ಪು ಬೆಗೆಗಿನ ಕೆಲ ಪಾಠಗಳನ್ನು ಕೈಬಿಡಲಾಗಿದೆ ಎನ್ನು ಚರ್ಚೆ ನಡೆದಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇದೀಗ ಮತ್ತೆ ಪಠ್ಯ ಪರಿಷ್ಕರಣೆ ಮಾಡಲಾಗುತ್ತದೆ ಎನ್ನುವ ಚರ್ಚೆ ಆರಂಭವಾಗಿದೆ.
ಅದರಲ್ಲಿಯೂ ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣವಿರುವ ಪಠ್ಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾಜಿ ಶಿಕ್ಷಣ ಸಚಿವರಾಗಿದ್ದ ಬಿ.ಸಿ. ನಾಗೇಶ್ ಅವರು ರೋಹಿತ್ ಚಕ್ರತೀರ್ಥ ಸಮಿತಿ ಅಡಿಯಲ್ಲಿ ಈ ಪಠ್ಯವನ್ನು ಸೇರಿಸಿದ್ದರು. ಆದರೆ ಈಗ ಈ ಪಠ್ಯವನ್ನು ತೆಗೆದು ಹಾಕುವ ಒತ್ತಡ ಎದುರಾಗಿದೆ ಎನ್ನಲಾಗಿದೆ.
ಬಿಜೆಪಿ ಸರ್ಕಾರದಲ್ಲಿ ಮಕ್ಕಳ ಪಠ್ಯ ಕೇಸರಿಮಯವಾಗಿದ್ದು, ರೋಹಿತ್ ಚಕ್ರತೀರ್ಥ ಪರಿಷ್ಕರಿಸಿದ್ದ ಪಠ್ಯವನ್ನೇ ತೆಗೆದು ಹಾಕುವ ಒತ್ತಡ ಕೇಳಿಬಂದಿದೆ. ಈ ಪಠ್ಯದಲ್ಲಿ ಬಿ.ಆರ್. ಅಂಬೇಡ್ಕರ್, ಟಿಪ್ಪು ಸುಲ್ತಾನ್, ಬಸವಣ್ಣ ಹಾಗೂ ಕುವೆಂಪು ಅವರನ್ನು ಅವಮಾನ ಮಾಡಲಾಗಿದೆ ಎನ್ನುವ ಆರೋಪ ಎದುರಾಗಿದ್ದು, ಈ ಹಿಂದೆ ಜಾರಿಯಲ್ಲಿದ್ದ ಬರಗೂರು ರಾಮಚಂದ್ರಪ್ಪನವರ ಪರಿಷ್ಕರಣೆಯ ಪಠ್ಯವನ್ನು ಮುಂದುವರಿಸುವಂತೆ ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ಒತ್ತಾಯಿಸಿದ್ದಾರೆ.