ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬ ಹರಿದಿನಗಳು, ಮದುವೆ ಮುಂಜಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ಜಗಮಗ ರೇಷ್ಮೆ ಸೀರೆಗಳಲ್ಲಿ ಮಿಂಚುತ್ತಾರೆ. ಈ ರೇಷ್ಮೆ ಸೀರೆಗಳನ್ನುಕಾಪಾಡುವುದೇ ದೊಡ್ಡ ಸಮಸ್ಯೆ. ಜೋಪಾನವಾಗಿ ರೇಷ್ಮೆ ಸೀರೆಗಳನ್ನು ಇರಿಸದಿದ್ದರೆ ಅದು ಹಾಳಾಗುವುದು ನಿಶ್ಚಿತ. ಹಾಗಾದ್ರೆ ರೇಷ್ಮೆ ಸೀರೆಗಳನ್ನು ಹೇಗೆ ಜೋಪಾನಮಾಡುವುದು ಎಂಬ ಚಿಂತೆಯೇ? ಈ ಸಿಂಪಲ್ ಮೆಥಡ್ ಮೂಲಕ ನಿಮ್ಮ ರೇಷ್ಮೆ ಸೀರೆಗಳನ್ನು ಕಾಪಾಡಬಹುದು.
ರೇಷ್ಮೆ ಸೀರೆಗಳನ್ನು ಅಥವಾ ರೇಷ್ಮೆ ಬಟ್ಟೆಗಳನ್ನು ಮುಖ್ಯವಾಗಿ ಧೂಳು ತಾಗದಂತೆ ನೋಡಿಕೊಳ್ಳುವುದು ಅತೀ ಅಗತ್ಯ. ಶುಭ್ರವಾದ ಹತ್ತಿಬಟ್ಟೆಯ ಚೀಲದಲ್ಲಿ ಈ ಬಟ್ಟೆಗಳನ್ನು ಸುತ್ತಿ ಇಟ್ಟರೆ ಇದು ಹಾಳಾಗದಂತೆ ಕಾಪಾಡಬಹದು. ಸೀರೆಗಳನ್ನು ಒಂದರ ಮೇಲೊಂದು ಪೇರಿಸಿಡುವುದಾದರೆ ಪ್ರತೀ ಸೀರೆಯ ಮಧ್ಯೆ ಒಂದೊಂದು ಟಿಷ್ಯೂಪೇಪರ್ ಇರಿಸಿ. ಇದರಿಂದ ಬಟ್ಟೆ ಹಾಳಾಗುವುದನ್ನು ತಡೆಯಬಹುದು. ರೇಷ್ಮೆ ಸೀರೆಗಳನ್ನು ಇಡುವ ಜಾಗದಲ್ಲಿ ತೇವಾಂಶ ಇರದಂತೆ ನೋಡಿಕೊಳ್ಳುವುದು ಅತೀ ಅವಶ್ಯ. ಸಿಲಿಕಾ ಜೆಲ್ ಪ್ಯಾಕ್‌ಗಳನ್ನು ಸೀರೆಗಳನ್ನು ಇಡುವ ಸ್ಥಳದಲ್ಲಿ ಇರಿಸುವುದರಿಂದ ಸೀರೆಗಳು ಬಹುಕಾಲ ಬಾಳ್ವಿಕೆ ಬರುತ್ತವೆ.
ಉಟ್ಟ ಸೀರೆಗಳನ್ನು ಹಾಗೆಯೇ ಕಪಾಟಿನಲ್ಲಿಡುವ ಪದ್ಧತಿಯನ್ನು ಬಿಟ್ಟು ಬಿಡಿ. ಉಟ್ಟ ಸೀರೆಯಲ್ಲಿ ಅನೇಕ ಕೊಳಕುಗಳು ಅಂಟುವ ಸಾಧ್ಯತೆಗಳಿರುತ್ತವೆ. ಡ್ರೈ ಕ್ಲೀನ್‌ಗೆ ಕೊಟ್ಟು ನಂತರ ಬಿಸಿಲಲ್ಲಿ ಒಣಗಿಸಿ, ಕಪಾಟಿನಲ್ಲಿಡುವ ಕಾರ್ಯವನ್ನು ಮಾಡಿ. ಇದರಿಂದ ಬಾಳಿಕೆ ಬರುತ್ತವೆ. ಯಾವ ಕಾರಣಕ್ಕೂ ಸ್ಪ್ರೇ, ಡಿಯೋಡ್ರೆಂಟ್ ಬಳಸಬೇಡಿ. ಇದರಿಂದ ರೇಷ್ಮೆ ಸೀರೆಯ ಝರಿ, ಹೊಳಪುಗಳು ಮಾಸುವ ಸಾಧ್ಯತೆಗಳಿರುತ್ತವೆ.