ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಆಗಸ್ಟ್ ಒಂದರಿಂದ ಜನತಾ ದರ್ಶನ ಆರಂಭಿಸುವುದಾಗಿ ವಸತಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಸಚಿವ ಜಮೀರ್ ಅಹಮದ್ ಘೋಷಿಸಿದ್ದಾರೆ.
ವಸತಿ ಹಾಗೂ ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯ ಸವಲತ್ತು ಮತ್ತು ಸೌಲಭ್ಯ ಗಳಿಗಾಗಿ ಸಾರ್ವಜನಿಕರು ಬೆಂಗಳೂರಿನ ವರೆಗೆ ಬರುವುದು ತಪ್ಪಿಸಲು ಜನರ ಬಳಿಗೆ ನಾನೇ ಹೋಗಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಎರಡು ದಿನ ಜನತಾ ದರ್ಶನ ನಡೆಸಲಿದ್ದೇನೆ. ಜಿಲ್ಲೆ ವ್ಯಾಪ್ತಿಯ ಎರಡೂ ಇಲಾಖೆಗಳ ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳು ಅಲ್ಲಿರಲಿದ್ದಾರೆ ಎಂದು ಹೇಳಿದರು.
ಆಗಸ್ಟ್ ಒಳಗೆ ಎರಡೂ ಇಲಾಖೆಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಪರಿಹರಿಸಲು ಅಧಿಕಾರಿಗಳಿಗೆ ಎರಡು ತಿಂಗಳ ಗಡುವು ನೀಡುತ್ತಿದ್ದೇನೆ ಎಂದು ಸೂಚನೆ ನೀಡಿದರು.
ಜನತಾ ದರ್ಶನ ಸಂದರ್ಭದಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ಅಥವಾ ಅಧಿಕಾರಿಗಳ ಮಟ್ಟದಲ್ಲಿ ತಪ್ಪು ನಡೆದಿದ್ದರೆ ದೂರುಗಳು ಬಂದರೆ ಅಂತಹವರ ವಿರುದ್ಧ ಸ್ಥಳದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.