ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಮಗದನ್ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದ 216 ಭಾರತೀಯರನ್ನು ಏರ್ ಇಂಡಿಯಾ (Air India) ವಿಮಾನವು ಸುರಕ್ಷಿತವಾಗಿ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋಗೆ ತಲುಪಿಸಿದೆ.
ಜೂನ್ 6ರಂದು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟ ಏರ್ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಷ್ಯಾದ ಮಗದನ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಗಿತ್ತು. ಇದರಿಂದಾಗಿ 216 ಭಾರತೀಯರು ಹಾಗೂ ವಿಮಾನದ 16 ಸಿಬ್ಬಂದಿಯು ರಷ್ಯಾದಲ್ಲೇ ಸಿಲುಕಬೇಕಾಗಿತ್ತು. ಈಗ ಬೇರೊಂದು ವಿಮಾನವು ಜನರನ್ನು ಸ್ಯಾನ್‌ಫ್ರಾನ್ಸಿಸ್ಕೋಗೆ ತಲುಪಿಸಿದೆ.
ಗುರುವಾರ (ಜೂನ್ 8) ಬೆಳಗ್ಗೆ 4.57ಕ್ಕೆ ಮಗದನ್ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 12.37ಕ್ಕೆ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ತಲುಪಿದೆ ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ. ‘ಏರ್ ಇಂಡಿಯಾ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಲು ಸ್ಯಾನ್ ಫ್ರಾನ್ಸಿಸ್ಕೋ ಅಧಿಕಾರಿಗಳು ಎಲ್ಲ ರೀತಿಯ ನೆರವು ನೀಡಿದರು. ವೈದ್ಯಕೀಯ ಸೌಲಭ್ಯ, ಜನರಿಗೆ ಸಾರಿಗೆ ವ್ಯವಸ್ಥೆ ಸೇರಿ ಸಕಲ ರೀತಿಯ ನೆರವು ನೀಡಿದ್ದಾರೆ’ ಎಂದು ಏರ್ ಇಂಡಿಯಾ ತಿಳಿಸಿದೆ.
ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ಭಾರತೀಯರು ರಷ್ಯಾದಲ್ಲಿ ತೊಂದರೆ ಅನುಭವಿಸಿದ ಕಾರಣ ಎಲ್ಲರ ಪ್ರಯಾಣದ ವೆಚ್ಚವನ್ನು ಏರ್ ಇಂಡಿಯಾ ರಿಫಂಡ್ ಮಾಡಲಿದೆ ಎಂದು ತಿಳಿದುಬಂದಿದೆ.
ಊಟವಿಲ್ಲದೆ ಕಾಲ ಕಳೆದಿದ್ದ ಭಾರತೀಯರು
ರಷ್ಯಾದ ಮಗದನ್ ನಗರದಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಭಾರತೀಯರು ಊಟ, ತಂಗಲು ಸರಿಯಾದ ರೂಮಿಲ್ಲದೆ ತೊಂದರೆ ಅನುಭವಿಸಿದ್ದರು. ಇರಲು ಸರಿಯಾದ ರೂಮ್ ಇಲ್ಲ, ತಿನ್ನಲು ಊಟ ಕೂಡ ಸಿಕ್ಕಿಲ್ಲ. ಶಾಲೆಗಳಲ್ಲಿ ಭಾರತೀಯರಿಗೆ ಮಲಗಲು ಅವಕಾಶ ಮಾಡಿಕೊಟ್ಟರೂ, ಒಂದೇ ಚಾಪೆ ಮೇಲೆ ಮಲಗುವ ಅನಿವಾರ್ಯ ಎದುರಾಗಿದೆ. ಹಿರಿಯರು, ಮಕ್ಕಳಂತೂ ತುಂಬ ತೊಂದರೆ ಅನುಭವಿಸಿದ್ದಾರೆ ಎಂದು ತಿಳಿದುಬಂದಿತ್ತು. ಆದರೂ, ರಷ್ಯಾ ಅಧಿಕಾರಿಗಳು ಭಾರತೀಯರು ತಂಗಲು ತಕ್ಕಮಟ್ಟಿಗೆ ನೆರವಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.