ಹೊಸದಿಗಂತ ಡಿಜಿಟಲ್ ಡೆಸ್ಕ್:
ತೊಂಡೆಕಾಯಿ ಒಂದು ಉತ್ತಮ ತರಕಾರಿ. ತೊಂಡೆಕಾಯಿಯಿಂದ ವಿಧ ವಿಧವಾದ ಅಡುಗೆ ತಯಾರಿಸಬಹುದು. ತೊಂಡೆ ಹುಳಿ, ತೊಂಡೆ ಸಾಂಬಾರ್, ತೊಂಡೆ ಭೂತಕೊದ್ದೆಲ್, ತೊಂಡೆ ಪಲ್ಯ, ತೊಂಡೆ ಗೋಡಂಬಿ ಪಲ್ಯ, ತೊಂಡೆ ಮೊಸರುಗೊಜ್ಜು ಹೀಗೆ ವೈವಿಧ್ಯಮಯ ಪದಾರ್ಥಗಳನ್ನು ತೊಂಡೆಯಿಂದ ಮಾಡಬಹುದು. ಇದೊಂದು ರುಚಿಕರ ತರಕಾರಿ. ಎಳೆಯ ತೊಂಡೆಯ ವೆಜ್ ಫ್ರೈ ಬಾಯಲ್ಲಿ ನೀರೂರಿಸುತ್ತದೆ. ತೊಂಡೆಕಾಯಿಯ ಮಸಾಲ ಫ್ರೈ ಪಲ್ಯವನ್ನು ಹೀಗೆ ಮಾಡಿ. ಇದು ರುಚಿಯಾಗಿರುತ್ತದೆ.
ಎಳೆಯ ತೊಂಡೆಕಾಯಿಯನ್ನು ಶುಚಿಯಾಗಿ ತೊಳೆದು ಉದ್ದುದ್ದವಾಗಿ ಕತ್ತರಿಸಿಕೊಳ್ಳಿ. ಬಾಣಲೆಯನ್ನು ಸ್ಟೌ ಮೇಲಿಟ್ಟು ಶುದ್ದವಾದ ತೆಂಗಿನೆಣ್ಣೆ ಸುರಿಯಿರಿ. ಬಾಣಲೆಯಲ್ಲಿರುವ ಎಣ್ಣೆ ಬಿಸಿಯಾದ ತಕ್ಷಣ ಕತ್ತರಿಸಿಟ್ಟುಕೊಂಡ ಈರುಳ್ಳಿ, ಟೊಮೆಟೋ ಹಾಕಿ ಫ್ರೈ ಮಾಡಿ. ತುಂಡುಮಾಡಿದ ತೊಂಡೆಕಾಯಿಯನ್ನು ಸೇರಿಸಿ ಫ್ರೈ ಮಾಡಿ.
ಚೆನ್ನಾಗಿ ಫ್ರೈ ಆಗುತ್ತಿದ್ದಂತೆಯೇ ಅರಶಿನ ಪುಡಿ, ಮೆಣಸಿನ ಪುಡಿ, ಗರಂ ಮಸಾಲಾ, ಧನಿಯಾ ಪುಡಿ ಸೇರಿಸಿ ಮಿಶ್ರಮಾಡಿಕೊಳ್ಳಿ. ಫರಿಮಳ ಬಂದ ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಗೊಟಾಯಿಸಿ. ಕೊನೆಯಲ್ಲಿ ತೆಂಗಿನ ತುರಿ ಸೇರಿಸಿ. ಪ್ರತ್ಯೇಕ ಬಾಣಲೆಯಲ್ಲಿ ಸ್ವಲ್ಪ ಹೆಚ್ಚೇ ತೆಂಗಿನೆಣ್ಣೆ ಇಟ್ಟು ಬಿಸಿ ಮಾಡಿ, ಅದಕ್ಕೆ ಬೇವಿನೆಲೆ, ಇಂಗು, ಜೀರಿಗೆ ,ಸಾಸಿವೆ ಹಾಕಿ ಚೆನ್ನಾಗಿ ಸಿಡಿಸಿ, ಆ ಒಗ್ಗರಣೆಯನ್ನು ತೊಂಡೆ ಪಲ್ಯಕ್ಕೆ ಕೊಡಿ. ರುಚಿ ರುಚಿಯಾದ ತೊಂಡೆ ಪಲ್ಯ ಸಿದ್ದವಾಗಿದೆ. ಇದು ಚಪಾತಿ, ರೊಟ್ಟಿಯೊಂದಿಗೆ ಸವಿಯಲು ಬಲು ರುಚಿ.