NCP ಮುಖ್ಯಸ್ಥ ಶರದ್​ ಪವಾರ್​ಗೆ ಜೀವ ಬೆದರಿಕೆ: ಐಟಿ ಉದ್ಯೋಗಿ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಎನ್‌ ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಪುಣೆ ಮೂಲದ ಸಾಗರ್‌ ಬರ್ವೆ(32) ಎಂಬಾತನನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಭಾನುವಾರದಂದು ಅರೆಸ್ಟ್‌ ಮಾಡಿದ್ದಾರೆ.

ಆರೋಪಿ ಶರದ್‌ ಪವಾರ್‌ ಅವರ ಮಗಳು ಸುಪ್ರಿಯಾ ಸುಳೆ ಅವರ ವಾಟ್ಸಾಪ್‌ ಗೆ ಸಂದೇಶವನ್ನು ಕಳುಹಿಸಿ ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ಸುಪ್ರಿಯಾ ಸುಳೆ ಮುಂಬೈ ಪೊಲೀಸರಿಗೆ ದೂರು ನೀಡಿ, ಮಹಾರಾಷ್ಟ್ರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಲ್ಲಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು.

ಫೇಸ್‌ ಬುಕ್‌ ನಲ್ಲಿ ನರೇಂದ್ರ ದಾಭೋಲ್ಕರ್ ಹತ್ಯೆಯನ್ನು ಉಲ್ಲೇಖಿಸಿ, ಶರದ್‌ ಪವಾರ್‌ ಅವರಿಗೆ ಜೀವ ಬೆದರಿಕೆಯ ಪೋಸ್ಟನ್ನು ಆರೋಪಿ ಹಾಕಿದ್ದ. ಈ ಸಂಬಂಧ ಲೋಕಮಾನ್ಯ ತಿಲಕ್ ಮಾರ್ಗ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ನೀಡಲಾಗಿತ್ತು, ಪೊಲೀಸರು ಐಪಿ ಅಡ್ರಸ್‌ ನ್ನು ಪತ್ತೆ ಮಾಡಿ ಆರೋಪಿ ಸಾಗರ್‌ ನನ್ನು ಬಂಧಿಸಿದ್ದಾರೆ.

ಟ್ವಿಟರ್‌ ನಲ್ಲೂ ಜೀವ ಬೆದರಿಕೆ ಬಂದಿದ್ದು, ಅದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ಆರೋಪಿಯನ್ನು ಜೂ. 14ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಬೆದರಿಕೆಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಮಾಜಿ ಸಿಎಂಗೆ ಭದ್ರತೆಯನ್ನು ಹೆಚ್ಚಿಸುವಂತೆ ಪೊಲೀಸರಿಗೆ ಸೂಚಿಸಿದ್ದರು.

ಎನ್‌ಸಿಪಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ, ಪ್ರಮುಖ ವಿರೋಧ ಪಕ್ಷದ ನಾಯಕನಿಗೆ ಬೆದರಿಕೆ ಹಾಕುವುದನ್ನು ಸಹಿಸಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!