ಹೊಸದಿಗಂತ ವರದಿ ಅಂಕೋಲಾ:
ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯ ಸ್ಪೋಟಕ ಪತ್ತೆದಳದಲ್ಲಿ ಬಂಗಾರ ಎನಿಸಿಕೊಂಡಿದ್ದ ಲ್ಯಾಬಡ್ರಾರ್ ರಿಟ್ರೇವರ್ ತಳಿಯ ಶ್ವಾನ ಬೆಳ್ಳಿ ಅನಾರೋಗ್ಯದಿಂದ ಮೃತಪಟ್ಟಿದೆ.
ಹತ್ತು ವರ್ಷ ವಯಸ್ಸಿನ ಬೆಳ್ಳಿ ಕಳೆದ ಮೂರು ತಿಂಗಳುಗಳುಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಮೂರುದಿನಗಳಿಂದ ಅನ್ನ ಆಹಾರಗಳನ್ನು ಸರಿಯಾಗಿ ಸೇವಿಸುತ್ತಿರಲಿಲ್ಲ.
ಬೆಳ್ಳಿಯ ಚಿಕಿತ್ಸೆಗೆ ಪೊಲೀಸ್ ಇಲಾಖೆಯಿಂದ ಸಾಕಷ್ಟು ಪ್ರಯತ್ನ ನಡೆಸಲಾಗಿತ್ತಾದರೂ
ಬುಧವಾರ ಸಂಜೆ ಬೆಳ್ಳಿ ಮೃತ ಪಟ್ಟಿದ್ದು ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಭಾವುಕರಾಗಲು ಕಾರಣವಾಗಿದೆ.
ಒಂಬತ್ತು ವರ್ಷಗಳ ಸೇವೆ
ನಾಲ್ಕು ತಿಂಗಳ ಮರಿ ಇದ್ದಾಗಲೇ ವಿಶೇಷ ತರಬೇತಿ ಪಡೆದ ಬೆಳ್ಳಿ ಒಂಬತ್ತು ವರ್ಷಗಳ ಕಾಲ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದು ಗಣ್ಯರ ಆಗಮನ ವಿಶೇಷ ಬಂದೋಬಸ್ತ್ ಸಂದರ್ಭದಲ್ಲಿ ಸ್ಪೋಟಕ ಪತ್ತೆ ಕಾರ್ಯದಲ್ಲಿ ಕೆಲಸ ನಿರ್ವಹಿಸಿತ್ತು.
ಇತ್ತೀಚೆಗೆ ಅಂಕೋಲಾ ತಾಲೂಕಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಸೇರಿದಂತೆ ಅಮಿತ್ ಷಾ,ಯೋಗಿ ಆದಿತ್ಯನಾಥ್, ಹಿಂದಿನ ಸರ್ಕಾರದ ಮುಖ್ಯ ಮಂತ್ರಿಗಳ ಆಗಮನದ ಸಂದರ್ಭದಲ್ಲಿ ಸ್ಪೋಟಕ ಪತ್ತೆ ಕರ್ತವ್ಯ ನಿರ್ವಹಿಸಿದ ಬೆಳ್ಳಿಯ ಸೇವೆಯನ್ನು ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ, ಬೆಳಗಾವಿ ಅಧಿವೇಶನ ಸೇರಿದಂತೆ ನೆರೆಯ ಗೋವಾ ರಾಜ್ಯದಲ್ಲಿ ಸಹ ವಿಶೇಷ ಸಂದರ್ಭಗಳಲ್ಲಿ ಪಡೆಯಲಾಗಿತ್ತು.
ಮಂಗಳೂರು ಪೊಲೀಸ್ ವಲಯದ ಬಾಂಬ್ ಪತ್ತೆ ಸ್ಪರ್ಧೆಯಲ್ಲಿ ಬೆಳ್ಳಿ ಪ್ರಥಮ ಸ್ಥಾನ ಸಹ ಪಡೆದುಕೊಂಡಿತ್ತು.
ಸರ್ಕಾರಿ ಗೌರವ
ಬೆಳ್ಳಿಯ ಮೃತ ದೇಹವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಮಣ್ಣು ಮಾಡಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ, ಬಾಂಬ್ ನಿಗ್ರಹ ದಳದ ನಿರ್ವಾಹಕ ಬೆಳ್ಳಿಯೊಂದಿಗೆ ಸದಾ ಒಡನಾಟದಲ್ಲಿದ್ದ ನಿತ್ಯಾನಂದ ಗೌಡ,ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡು ಬೆಳ್ಳಿಗೆ ಅಂತಿಮ ಗೌರವ ಸಲ್ಲಿಸಿದರು.