ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಂದಾಣಿಕೆ ರಾಜಕಾರಣ ಆರೋಪ ಮಾಡಿದ್ದ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ನನ್ನ ಜೀವಮಾನದಲ್ಲಿ ನಾನು ಹೊಂದಾಣಿಕೆ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ. ಅದರ ಅಗತ್ಯವೂ ನನಗಿಲ್ಲ ಎಂದು ಖಾರವಾಗಿ ನುಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಹೊಂದಾಣಿಕೆ ರಾಜಕಾರಣ ಎಂದು ಹೇಳಿದವರು ಯಾರೇ ಆಗಿರಲಿ, ಅವರೆಲ್ಲರಿಗೂಸ್ಪಷ್ಟ ಪಡಿಸುತ್ತೇನೆ. ನಾನು ಯಾವತ್ತೂ ಹೊಂದಾಣಿಕೆ ರಾಜಕಾರಣ ಮಾಡಿದವನೂ ಅಲ್ಲ, ಮಾಡುವುದೂ ಇಲ್ಲ. ಈಗಾಗಲೇ ಮಾತನಾಡಿದವರಿಗೂ ಕೂಡ ಎಲ್ಲಾ ಪಕ್ಷದವರ ಜೊತೆಯೂ ಸ್ನೇಹಿತರಿದ್ದಾರೆ. ಇದನ್ನೇ ದೊಡ್ಡ ವಿಷಯ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.
ನನಗೆ ಹೊಂದಾಣಿಕೆ ರಾಜಕೀಯ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ವಿರುದ್ಧ 5 ಹೊಸ ಕೇಸ್ ಗಳನ್ನು ದಾಖಲಿಸಿದ್ದೇವೆ. 65 ಎಸಿಬಿ ಕೇಸ್ ಗಳನ್ನು ಲೋಕಾಯುಕ್ತಕ್ಕೆ ನೀಡಿದ್ದೇವೆ. ಪ್ರತಾಪ್ ಸಿಂಹ ಅವರು ಸಂಪೂರ್ಣ ಮಾಹಿತಿ ಇಲ್ಲದೆ ಮಾತನಾಡುತ್ತಾರೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.