ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ನಾಳೆಯಿಂದ ಚಾಲನೆ ಸಿಗಲಿದೆ ಎಂದು ಬೆಳ್ಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದರು. ಇದೀಗ ಸರ್ಕಾರದ ಕ್ಯಾಬಿನೆಟ್ ಸಭೆಯ ಬಳಿಕ ಈ ಗ್ಯಾರಂಟಿ ಜಾರಿ ಮುಂದೂಡಿಕೆಯಾಗಿದ್ದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕನಿಷ್ಠ ನಾಲ್ಕೈದು ದಿನಗಳ ಕಾಲ ಗೃಹ ಲಕ್ಷ್ಮೀ ಯೋಜನೆ ಮುಂದೂಡಿಕೆಯಾಗಿದ್ದಾಗಿ ತಿಳಿಸಿದ್ದಾರೆ. ಶುಕ್ರವಾರ ಯೋಜನೆ ಲಾಂಚ್ ಆಗೋದಿಲ್ಲ ಎಂದು ತಿಳಿಸಿದ್ದಾರೆ. ಯೋಜನೆ ಅರ್ಜಿ ಭರ್ತಿ ಮಾಡಲು ಬೇರೆ ಬೇರೆ ಅವಕಾಶ ಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಹೊಸ ಌಪ್ ಸಿದ್ಧಪಡಿಸಲು ಇ-ಗವರ್ನೆನ್ಸ್ಗೆ ಕೇಳಿಕೊಂಡಿದ್ದೇವೆ. ಹೊಸ ಌಪ್ ಸಿದ್ಧಪಡಿಸಲು 4-5ರಿಂದ ದಿನ ಬೇಕಾಗಲಿದೆ ಅಂತ ಹೇಳಿದ್ದಾಗಿ ಸಚಿವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ನೀಡಿದ್ದ ಪ್ರತಿಕಾ ಪ್ರಕಟಣೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಶುಕ್ರವಾರದಿಂದ ಆರಂಭವಾಗಲಿದೆ ಎಂದು ತಿಳಿಸಲಾಗಿತ್ತು. ಬೆಂಗಳೂರು ಒನ್, ಗ್ರಾಮ್ ಒನ್‌ನಲ್ಲಿ ನೋಂದಣಿಗೆ ಅವಕಾಶ ಇರಲಿದೆ. ಸೇವಾಸಿಂಧು ಪೋರ್ಟಲ್‌ನಲ್ಲಿಯೂ ನೋಂದಣಿಗೆ ಅವಕಾಶವಿದೆ. ಇದಕ್ಕೆ ಬ್ಯಾಂಕ್, ಆಧಾರ್,ಪತಿ ಅಥವಾ ಮಗ ತೆರಿಗೆದಾರರು ಅಲ್ಲ ಎಂದು ತೋರಿಸುವ ಒಂದು ಪ್ರತಿಯನ್ನು ಲಗತ್ತಿಸಬೇಕಾಗಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮುಂದಿನ ಐದು ವರ್ಷಗಳ ಕಾಲ ಮನೆ ಒಡತಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂ. ಜಮೆ ಮಾಡಲಾಗುತ್ತದೆ ಎಂದಿದ್ದರು.