ಅಕ್ಕಿ ನೀಡಲು ಕೇಂದ್ರ ನಿರಾಕರಣೆ ಆರೋಪ: BJP, JDS ಮುಂದೆ 7 ಪ್ರಶ್ನೆ ಇಟ್ಟ ಸುರ್ಜೆವಾಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಿಸುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಳಿಕ ರಾಜ್ಯದಲ್ಲಿ ವಾಕ್ಸಮರ ಶುರುವಾಗಿದ್ದು, ಈ ಕುರಿತು ಸುದ್ದಿಗೋಷ್ಠಿ ನಡೆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ, ಕೇಂದ್ರದ ಮೋದಿ ಸರ್ಕಾರ ಹಾಗೂ ಬಿಜೆಪಿ ಬಿ ಟೀಂ ಎಂದು ಕಾಂಗ್ರೆಸ್‌ ಆರೋಪಿಸುವ ಜೆಡಿಎಸ್‌ ಮುಂದೆ ಒಟ್ಟು 7 ಪ್ರಶ್ನೆಗಳನ್ನು ಇಟ್ಟಿದ್ದಾರೆ.

1. ತನ್ನ ಸೋಲಿನಿಂದಾಗಿ ಜನರಿಗೆ ಅನ್ನ ನಿರಾಕರಿಸುವಷ್ಟರ ಮಟ್ಟಿಗೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಕುರುಡರಾಗಿದ್ದಾರಾ?

2. FCI ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ವ್ಯಾಪಾರಿಗಳಿಗೆ ಅಕ್ಕಿ ಮಾರಲು ಸಿದ್ಧವಿದೆ. ಆದರೆ, ರಾಜ್ಯಕ್ಕೆ ಉತ್ತಮ ದರದಲ್ಲಿ ಅಕ್ಕಿ ನೀಡಲು ನಿರ್ಬಂಧ ಹೇರಿರುವುದೇಕೆ?

ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಬಡ ಕುಟುಂಬಗಳಿಗೆ ಉಚಿತ ಅಕ್ಕಿ ನೀಡಬಾರದು ಎಂಬ ಒಂದೇ ಉದ್ದೇಶದಿಂದ ಈ ತೀರ್ಮಾನ ಮಾಡಿದೆಯಲ್ಲವೇ?

3. ಕಾಂಗ್ರೆಸ್ ಸರ್ಕಾರ FCI ಗೆ ಹೆಚ್ಚುವರಿ ಅಕ್ಕಿ ನೀಡುವಂತೆ ಕೇಳಿದ ನಂತರ ಕೇಂದ್ರ ಸರ್ಕಾರವು ಕೇವಲ ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಮಾರಾಟ ಮಾಡುವಂತೆ ನಿರ್ದೇಶನ ನೀಡಿರುವುದು ಸ್ವಲ್ಪ ಅತಿಯಾದ ಕಾಕತಾಳೀಯವಲ್ಲವೇ?

4. ಬಿಜೆಪಿ ಹಾಗೂ ಮೋದಿ ಸರ್ಕಾರದ ಬೆಂಬಲವಿರುವ ದೊಡ್ಡ ವ್ಯಾಪಾರಿಗಳ ಕೂಟ ಬಡವರ ಅಕ್ಕಿಯನ್ನು ಕಸಿಯಲು ಮುಂದಾಗಿದೆಯೇ?

5. ಕರ್ನಾಟಕ ರಾಜ್ಯದ ಸಂಸದರು, ಕೇಂದ್ರದ ಮಂತ್ರಿಗಳು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಕಂಡು ಮೌನವಾಗಿರುವುದೇಕೆ? ಇಷ್ಟಾದರೂ ಅವರು ಸಂಸದ ಹಾಗೂ ಸಚಿವ ಸ್ಥಾನದಲ್ಲಿ ಒಂದು ದಿನ ಮುಂದುವರಿಯಲು ಯೋಗ್ಯರೇ? ರಾಜ್ಯದ ಆರೂವರೆ ಕೋಟಿ ಜನರಿಗೆ ದ್ರೋಹ ಬಗೆದಿರುವ ಅವರು ಕೂಡಲೇ ಯಾಕೆ ರಾಜೀನಾಮೆ ನೀಡಬಾರದು?

6. ರಾಜ್ಯ ಬಿಜೆಪಿ ನಾಯಕರು ಬಡವರು, ಎಸ್ ಸಿ, ಎಸ್ ಟಿ, ಒಬಿಸಿ ಬಡ ಕುಟುಂಬಗಳಿಗೆ ಅಕ್ಕಿ ನಿರಾಕರಿಸಿರುವ ವಿಚಾರದಲ್ಲಿ ಬಾಯಿಗೆ ಬೀಗ ಹಾಕಿಕೊಂಡಿರುವುದು ಏಕೆ? ಅವರ ಮೌನದ ಮೂಲಕ ಮೋದಿ ಸರ್ಕಾರ FCI ಗೆ ಅಕ್ಕಿ ನೀಡದಂತೆ ನಿರ್ದೇಶನ ನೀಡಲು ಒತ್ತಡ ಏರಿದ್ದು ಇವರೇ ಎಂದು ಸಾಬೀತುಪಡಿಸುತ್ತಿದೆಯೆ?

7. ಮೋದಿ ಸರ್ಕಾರದ ಕರ್ನಾಟಕ ಹಾಗೂ ಬಡವರ ವಿರೋಧಿ ನೀತಿ ಬಗ್ಗೆ ಬಿಜೆಪಿಯ ಬಿ ಟೀಮ್ ಆಗಿರುವ ಜೆಡಿಎಸ್ ಯಾಕೆ ಮೌನವಾಗಿದೆ?

ಕನ್ನಡಿಗರಿಗೆ ಉತ್ತರ ಬೇಕಿದೆ.

ಒಂದು ವಿಚಾರ, ಬಿಜೆಪಿ ಸರ್ಕಾರ ಎಷ್ಟೇ ಅಡ್ಡಿಪಡಿಸಿದರು ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಬಡ ಕುಟುಂಬಗಳ ವಿರೋಧಿ ನೀತಿ ಹಾಗೂ ದ್ವೇಷವನ್ನು ಕನ್ನಡಿಗರು ಕ್ಷಮಿಸುವುದಿಲ್ಲ. ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!