ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಮುಂಗಾರು ಮಳೆಯ ಪ್ರಭಾವದಿಂದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಛತ್ತೀಸ್‌ಗಢ, ಒಡಿಶಾ, ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯಾಗುತ್ತಿದೆ. ಗುಜರಾತ್, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣ, ಅಸ್ಸಾಂ ಪಂಜಾಬ್ ಮತ್ತು ದೆಹಲಿಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ.
ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ
ಭಾರೀ ಮಳೆ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆಯನ್ನು ಘೋಷಿಸಿದ್ದಾರೆ. ಉತ್ತರಾಖಂಡ್ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತದ ಅಪಾಯವಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ನೈನಿತಾಲ್, ಚಂಪಾವತ್, ಪಿಥೋರಘಡ್, ಬಾಗೇಶ್ವರ್, ಡೆಹ್ರಾಡೂನ್, ತೆಹ್ರಿ ಮತ್ತು ಪೌರಿ ಜಿಲ್ಲೆಗಳಲ್ಲಿ ಭಾರೀ ಮಳೆ ಹಿನ್ನೆಲೆ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ.
ಪಂಚಕುಲದಲ್ಲಿ ಹಠಾತ್ ಪ್ರವಾಹದಲ್ಲಿ ಕಾರು ಸಮೇತ ಕೊಚ್ಚಿ ಹೋಗಿದ್ದ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಹಿಮಾಚಲ ಪ್ರದೇಶ ರಾಜ್ಯದಲ್ಲಿ ಹಠಾತ್ ಪ್ರವಾಹದಿಂದಾಗಿ ರಸ್ತೆಗಳು ಮತ್ತು ವಾಹನಗಳು ಹಾನಿಗೊಳಗಾಗಿವೆ. ಇದರಿಂದಾಗಿ ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಕಂಗ್ರಾ, ಮಂಡಿ ಮತ್ತು ಸೋಲನ್ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಸೋಮವಾರದಿಂದ ಮೂರು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು IMD ಅಧಿಕಾರಿಗಳು ಆರೆಂಜ್ ಅಲರ್ಟ್ ನೀಡಿದ್ದಾರೆ.
ಮುಂಬೈನಲ್ಲಿ ಭಾರೀ ಮಳೆ
ಮಹಾರಾಷ್ಟ್ರದ ಮುಂಬೈ ನಗರದಲ್ಲಿಯೂ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಮುಂಬೈನ ಮಲಾಡ್ ಮತ್ತು ಅಂಧೇರಿ ಪ್ರದೇಶಗಳಲ್ಲಿ ಪ್ರವಾಹದ ನೀರು ನುಗ್ಗಿತ್ತು. ಪ್ರವಾಹದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಿಎಂ ಏಕ್ ನಾಥ್ ಶಿಂಧೆ ಬೃಹಾನ್ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಅಸ್ಸಾಂನಲ್ಲಿ ಪ್ರವಾಹ
ಅಸ್ಸಾಂ ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ 14 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಜಲಾವೃತ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ದರಾಂಗ್ ಮತ್ತು ನಲ್ಬರಿ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಭಾರೀ ಆಸ್ತಿ ಹಾನಿಯಾಗಿದೆ. ಭಾರೀ ಮುಂಗಾರು ಮಳೆಯಿಂದಾಗಿ ಪೂಂಚ್ ಮತ್ತು ಮೆಂಡಾಲ್ ಜಿಲ್ಲೆಗಳಲ್ಲಿ ಪ್ರವಾಹ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಮಧ್ಯಪ್ರದೇಶ ರಾಜ್ಯದಲ್ಲೂ ಪ್ರವಾಹ ಉಂಟಾಗಿದೆ. ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಇದೇ 29ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.