ಹೊಸದಿಗಂತ ವರದಿ ಮಡಿಕೇರಿ:
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಆತುರದಲ್ಲಿ ಬುಲೆಟ್ ಹಾರಿಸುವ ಬದಲು ಸರ್ಕಾರಕ್ಕೆ ಸಲಹೆ ನೀಡಲಿ ಎಂದು ಜಿಲ್ಲಾ ಉಸ್ತುವಾರಿಯೂ ಆಗಿರುವ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.
ತಲಕಾವೇರಿಯಲ್ಲಿ ಮಾತೆ ಕಾವೇರಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್’ನ ಐದು ಗ್ಯಾರಂಟಿಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್’ಗೆ ಪ್ರತಿಕ್ರಿಯಿಸಿದರು.
ಹೆಚ್. ಡಿ. ಕುಮಾರಸ್ವಾಮಿ ಸಿಎಂ ಆಗಿದ್ದವರು, ಅವರಿಗೆ ಸ್ವಲ್ಪ ತಾಳ್ಮೆ ಎನ್ನುವುದು ಇರಬೇಕು. ಈಗಾಗಲೇ ಅವರು ಜನರಿಂದ ತಿರಸ್ಕೃತರಾಗಿದ್ದಾರೆ, ಇದೇ ರೀತಿ ಆಡಿದ್ರೆ ಇನ್ನಷ್ಟೂ ತಿರಸ್ಕೃತರಾಗುತ್ತಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಮಿಷನ್ಗಾಗಿ ಹಿಂದಿನ ಬಿಜೆಪಿ ಸರ್ಕಾರದ ಕಾಮಗಾರಿಗಳನ್ನು ತಡೆಹಿಡಿದಿದೆ ಎಂಬ ಗೋವಿಂದ ಕಾರಜೋಳ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ತಮ್ಮೊಳಗೇ ಬಡಿದಾಡಿಕೊಳ್ಳುತ್ತಿದ್ದು, ಅದನ್ನು ಮರೆಮಾಚಲು ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಯಾವುದೇ ಸರ್ಕಾರ ಬಂದಾಗಲೂ ಕೆಲಸ ಮಾಡಲು ಸಮಯ ಬೇಕಾಗುತ್ತದೆ. ಸದ್ಯದಲ್ಲೇ ಅಧಿವೇಶನ ಆರಂಭವಾಗುತ್ತದೆ. ಎಲ್ಲರೂ ಅನುಭವಿಗಳಿದ್ದೇವೆ, ಜನಪರ ಆಡಳಿತ ನಡೆಸುತ್ತೇವೆ ಎಂದರು.