ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಫೆಬ್ರವರಿಯಲ್ಲಿ ನಾಗಶೌರ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಒಂದು ಜೋಡಿ ಜಗಳವಾಡುತ್ತಿರುವುದನ್ನು ನೋಡಿ ಕೆಳಗೆ ಇಳಿದು ಅವರೊಂದಿಗೆ ಮಾತನಾಡಿದ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋಗೆ ಸಂಬಧಿಸಿದಂತೆ ನಟ ಈಗ ಕ್ಲಾರಿಟಿ ಕೊಟ್ಟಿದ್ದು, ಜೊತೆಗೆ ಮದುವೆಯಾಗಬಯಸುವ ಹೆಣ್ಮಕ್ಕಳು ಆಯ್ಕೆ ಮಾಡಿಕೊಳ್ಳುವ ಹುಡುಗ ಹೇಗಿರಬೇಕೆಂಬ ಬಗ್ಗೆ ಕಿವಿಮಾತು ಹೇಳಿದ್ದಾರೆ.
ನಾಗಶೌರ್ಯ ಅಭಿನಯದ ಹೊಸ ಸಿನಿಮಾ ‘ರಂಗಬಲಿ’ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳು ಈ ಘಟನೆ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಜವಾಗಿ ಏನಾಯಿತು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. “ನಾನು ಕೆಲಸದ ನಿಮಿತ್ತ ಕುಕಟ್ಪಲ್ಲಿ ಕಡೆಯಿಂದ ವಾಹನ ಚಲಾಯಿಸುತ್ತಿದ್ದಾಗ ಹುಡುಗ ತನ್ನ ಗೆಳತಿಯನ್ನು ಥಳಿಸುತ್ತಿರುವುದು ಕಣ್ಣಿಗೆ ಬಿತ್ತು. ನಾನು ತಕ್ಷಣ ಕಾರನ್ನು ನಿಲ್ಲಿಸಿ ಅವನ ಬಳಿಗೆ ಹೋಗಿ ಅವಳನ್ನು ಏಕೆ ಹೊಡೆಯುತ್ತೀದ್ದೀಯಾ ಹಾಗೆ ಅವಳಲ್ಲಿ ಕ್ಷಮೆ ಕೇಳುವಂತೆ ಹೇಳಿದೆ. ಆದರೆ, ಅದಕ್ಕೆ ಹುಡುಗಿ ಪ್ರತಿಕ್ರಿಯಿಸಿ ʻಅವನು ನನ್ನ ಬಾಯ್ಫ್ರೆಂಡ್ ಹೊಡೆದು ಸಾಯಿಸುತ್ತಾನೆ, ನಿಮಗೇನು ಕಷ್ಟ?’ ಎಂದು ವಾಪಸ್ ಪ್ರಶ್ನೆ ಮಾಡಿದರು. ಆ ಹುಡುಗಿಗೇ ಯಾವುದೇ ಕಷ್ಟ ಇಲ್ಲ ಅಂದಾಗ ನನ್ನದೇನು ಎಂದು ವಾಪಸ್ ನಡೆದೆ. ಸಾಲದ್ದಕ್ಕೆ ಪ್ರಚಾರಕ್ಕಾಗಿ ನಾನು ಈ ಗಲಾಟೆ ಮಾಡಿಸಿದೆ ಎಂದು ಸುದ್ದಿಯೂ ಆಯಿತೆಂದು ಬೇಸರ ಪಟ್ಟರು.
ಇದೇ ವೇಳೆ ಮದುವೆ ಆಗುವ ಹೆಣ್ಣು ಮಕ್ಕಳಿಗೆ ಸಲಹೆಯನ್ನೂ ನೀಡಿದರು. “ನಿಮ್ಮನ್ನು ಹೊಡೆಯುವ ಹುಡುಗರನ್ನು ಮದುವೆಯಾಗಬೇಡಿ. ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳ್ಳೆಯದಲ್ಲ. ಯಾರನ್ನು ನಂಬುವುದು? ಯಾರನ್ನು ನಂಬಬಾರದು? ಎಂಬುದರ ಬಗ್ಗೆ ಜಾಗರೂಕರಾಗಿರಿ ಸರಿಯಾದ ಹುಡುಗನನ್ನು ಆಯ್ಕೆ ಮಾಡಲು ಸಾಧ್ಯವಾಗದೆ ಹೆಣ್ಣು ಮಕ್ಕಳು ತಪ್ಪು ಮಾಡುತ್ತಿದ್ದಾರೆ ಎಂದರು.