ಹೊಸದಿಗಂತ ವರದಿ ಹುಬ್ಬಳ್ಳಿ:
ಕರ್ನಾಟಕದ ಮಹಿಳೆಯರಿಗೆ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. “ಶಕ್ತಿ” ಯೋಜನೆಯಡಿ ಈ ಸೌಲಭ್ಯ ಕಲ್ಪಿಸಲಾಗಿದ್ದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸಿದ ಮಹಿಳೆಯರ ಸಂಖ್ಯೆ ಎರಡು ಕೋಟಿಯ ಗಡಿ ತಲುಪಿದೆ. ಅದರ ಪ್ರಯಾಣದ ಟಿಕೆಟ್ ಮೌಲ್ಯ 50 ಕೋಟಿ ದಾಟಿದೆ.
“ಶಕ್ತಿ” ಯೋಜನೆಗೆ ರಾಜ್ಯಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಯೋಜನೆ ಜಾರಿಯಾಗಿ 16ನೇ ದಿನವೂ ಸಹ ಮಹಿಳೆಯರ ಪ್ರಯಾಣದ ಉತ್ಸಾಹ ಮುಂದುವರೆದಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಜೂನ್ 26 ರಂದು 14,85,663 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೌಲ್ಯ ರೂ. 3,94,56,890 ಗಳಾಗಿದೆ. ಶಕ್ತಿ ಯೋಜನೆಯ ಆರಂಭದ ದಿನ ಜೂ.11 ರಿಂದ ಜೂ.26 ರವರೆಗೆ ಒಟ್ಟು 1,99,55,040 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೌಲ್ಯ ರೂ. 50,70,47,176 ಗಳಾಗಿದೆ.
ಈ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಹೆಚ್ಚಳದ ಜೊತೆಗೆ ಪುರುಷ ಪ್ರಯಾಣಿಕರ ಸಂಖ್ಯೆಯಲ್ಲಿ ಸಹ ಏರಿಕೆಯಾಗಿದೆ. ಈ ಮೂಲಕ ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.