ಹೊಸದಿಗಂತ ವರದಿ, ಹುಬ್ಬಳ್ಳಿ:
ಭಾರತ ಭಾರತವಾಗಿ ಉಳಿಯಲು ಭಾರತೀಯರು ಕಂಕಣ ಬದ್ಧರಾಗಬೇಕಿದೆ ಎಂದು ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಘಟನ ಮಂತ್ರಿ ಶಂಕರಾನಂದ ಹೇಳಿದರು.
ಇಲ್ಲಿಯ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾ ಭವನದಲ್ಲಿ ವಿಕ್ರಮ ಕನ್ನಡ ವಾರ ಪತ್ರಿಕೆಯ ಕಿತ್ತೂರು ಕರ್ನಾಟಕ ಕಾಫಿಟೇಬಲ್ ಪುಸ್ತಕ ಅನಾವರಣ ಸಮಾರಂಭದಲ್ಲಿ ಮಾತನಾಡಿದರು.
ಜಗತ್ತು ಎದುರು ನೋಡಲು ಇಚ್ಚಿಸುತ್ತಿರುವ ಭಾರತವನ್ನು ಕೆಲವರಿಂದ ಕಟ್ಟಲು ಸಾಧ್ಯವಿಲ್ಲ. ಎಲ್ಲರೂ ತಮ್ಮದೆಯಾದ ಕೊಡುಗೆ ನೀಡಬೇಕಿದೆ ಎಂದು ತಿಳಿಸಿದರು.
ಜನಾಭಿಪ್ರಾಯದಿಂದ ಮಾತ್ರ ಬದಲಾವಣೆ ಸಾಧ್ಯ. ನಮ್ಮ ನೀತಿ ತಂತ್ರದ ಮೇಲೆ ದೇಶ ನಿರ್ಮಾಣವಾಗಬೇಕು ಎನ್ನುವ ಮನೋಭಾವ ಜನರಿಂದ ಬರಬೇಕು. ಭಾರತೀಯ ಗುರುಕುಲ ಶಿಕ್ಷಣಕ್ಕೆ ಸಂಬಂಧಿಸಿದ ತಪ್ಪು ಮಾಹಿತಿ ಜನರಲ್ಲಿ ಬೇರು ಬಿಟ್ಟಿದೆ. ಪ್ರಗತಿ ವಿರೋ ಎನ್ನುತ್ತಿದ್ದಾರೆ. ಇದರಿಂದ ಮಕ್ಕಳನ್ನು ಲಕ್ಷಾಂತರ ರೂ.ಕೊಟ್ಟು ಖಾಸಗಿ ಶಾಲೆ ಸೇರಿಸಲಾಗುತ್ತಿದೆ. ತಪ್ಪು ತಿಳಿವಳಿಕೆ ಹೊಗಲಾಡಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಭಾರತದ ವಿಚಾರ ಧಾರೆಗಳನ್ನು ಇಡೀ ಜಗತ್ತು ಸ್ವೀಕರಿಸುವುದರ ಜೊತೆಗೆ ಅನುರಿಸುತ್ತಿರುವುದು ಹೆಮ್ಮೆಯ ಸಂಗತಿ. ಯೋಗ, ಭಾರತೀಯ ಕುಟುಂಬ ಪದ್ಧತಿ ಅಧ್ಯಯನ ಮಾಡಲು ವಿದೇಶಿಯರು ಬರುತ್ತಿದ್ದಾರೆ ಎಂದರು.
ದೇಶದಲ್ಲಿ ಅನೇಕ ಸಂಗತಿಗಳು ಬದಲಾಗಿವೆ. ಜನರು ಸಹ ಭಾರತೀಯ ವಿಚಾರಗಳ ಒಪ್ಪಿಕೊಂಡು ಸಕ್ರಿಯರಾಗಿ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ. ಸರ್ಕಾರ ಜನರ ಅಭಿವೃದ್ಧಿ ಕಾರ್ಯ ಮಾಡಿದರೆ ವಿಕ್ರಮ ಪತ್ರಿಕೆ ಲೇಖನ, ವರದಿ ಹಾಗೂ ಹಲವಾರು ವಿಚಾರ ಸಾರುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.
ದೇಶದ ಹಲವಾರು ವಿಚಾರಧಾರೆಗಳು ಹೆಚ್ಚು ಪ್ರಚಾರ ಮಾಡಲು ಎಲ್ಲ ಮೂಲಗಳ ಅನುಸರಿಸಬೇಕಿದೆ. ೨೧ ನೇ ಶತಮಾದಲ್ಲಿ ಭಾರತ ಅಷ್ಟೇ ಅಲ್ಲ ಇಡೀ ವಿಶ್ವವೂ ಸಮೃದ್ಧವಾಗಿರಲು ಸಹ ಅನುಕೂಲವಾಗುತ್ತದೆ ಎಂದು ಹೇಳಿದರು.
ಸಂಸದ ಈರಣ್ಣ ಕಡಾಡಿ, ಶಾಸಕರಾದ ಸಿ.ಸಿ. ಪಾಟೀಲ್, ಮಹೇಶ ಟೆಂಗಿನಕಾಯಿ, ಎಮ್. ಆರ್. ಪಾಟೀಲ್ ವೇದಿಕೆಯಲ್ಲಿ ಇದ್ದರು.
ಕೋಮಲ್ ಆರ್ ನಾಡಿಗ ವಚನ ಗಾಯನ ಮಾಡಿದರು.
ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಸು. ನಾಗರಾಜ ವಂದಿಸಿದರು. ಉಪ ಸಂಪಾದಕಿ ದಿವ್ಯಾ ಹೆಗಡೆ ಕಬ್ಬಿನಗದ್ದೆ ನಿರ್ಹಹಿಸಿದರು. ಸ್ಮೀತಾ ವೆಂಕಟೇಶ , ಸಿರಿ ವೆಂಕಟೇಶ ವಂದೇ ಮಾತರಂ ಹಾಡಿದರು.
ಕಾರ್ಯಕ್ರಮದಲ್ಲಿ ಸ್ವ.ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ, ಹಿರಿಯ ಪ್ರಚಾರಕ ಪ.ರಾ. ಕೃಷ್ಣಮೂರ್ತಿ, ಪತ್ರಿಕೆಯ ಗೌರವ ಸಂಪಾದಕ ನ. ನಾಗರಾಜ, ಶಾಸಕ ಚಂದ್ರು ಲಮಾಣಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.