ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ ಎಂಬ ಘೋಷಣೆ ಸಿನಿಮಾ ಮಾರುಕಟ್ಟೆಯಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಈ ದಿನಾಂಕದ ಸುತ್ತಲೂ ಹಲವು ದೊಡ್ಡ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಪ್ಲಾನ್ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ.
ಈಗಾಗಲೇ ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಎರಡನೇ ಭಾಗ ಮತ್ತು ಅಡಿವಿಶೇಶ್ ಅಭಿನಯದ ‘ಡಕೈತ್’ ಕೂಡ ಮಾರ್ಚ್ 19ರಂದೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡಗಳು ತಿಳಿಸಿವೆ. ಈ ಪೈಪೋಟಿಯ ನಡುವೆಯೇ ಇದೀಗ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಬಿಡುಗಡೆ ದಿನಾಂಕವೂ ಬಹಿರಂಗವಾಗಿದೆ. ಚಿತ್ರತಂಡದ ಮಾಹಿತಿ ಪ್ರಕಾರ ‘ಪೆದ್ದಿ’ ಮಾರ್ಚ್ 27ರಂದು ಚಿತ್ರಮಂದಿರಗಳಿಗೆ ಬರಲಿದೆ.
ಒಂದು ವಾರದ ಅಂತರ ಇದ್ದರೂ, ‘ಪೆದ್ದಿ’ ಚಿತ್ರಕ್ಕೆ ಈಗಾಗಲೇ ಉತ್ತಮ ಕ್ರೇಜ್ ಸಿಕ್ಕಿದ್ದು, ‘ಟಾಕ್ಸಿಕ್’ ಜೊತೆ ಪರೋಕ್ಷ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ‘ಪೆದ್ದಿ’ ಸಿನಿಮಾದ ಚಿಕಿರಿ–ಚಿಕಿರಿ ಹಾಡು ಮತ್ತು ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆ ಪಡೆದುಕೊಂಡಿವೆ. ಇತ್ತೀಚೆಗೆ ಶೂಟಿಂಗ್ ವಿಳಂಬವಾಗುತ್ತಿದೆ ಎಂಬ ವದಂತಿಗಳ ನಡುವೆಯೇ ಬಿಡುಗಡೆಯ ದಿನಾಂಕ ಘೋಷಣೆಯಾಗಿರುವುದು ಗಮನಾರ್ಹ.
ಬುಚ್ಚಿಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್ ಜೊತೆ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿಯ ಕ್ರಿಕೆಟ್ ಆಟಗಾರನ ಕಥೆಯನ್ನು ಆಧರಿಸಿದ ಈ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸಂಗೀತವನ್ನು ಎ.ಆರ್. ರೆಹಮಾನ್ ನೀಡಿದ್ದಾರೆ.

