ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಅಜಂ ಖಾನ್ (Azam Khan) ವಿರುದ್ಧ ದಾಖಲಾಗಿದ್ದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಜು.15) ರಾಂಪುರ ನ್ಯಾಯಾಲಯ ದೋಷಿ ಎಂದು ಘೋಷಿಸಿದ್ದು,ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಅಜಂ ಖಾನ್ 2019ರ ಲೋಕಸಭೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ಅವರ ಜತೆಗಿನ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಸಂದರ್ಭ ರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಔಂಜನೇಯ ಕುಮಾರ್ ಸಿಂಗ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು. ಈ ಕಾರಣಕ್ಕೆ ಅಜಂ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಅಜಂ ಖಾನ್ ಮಾಡಿದ ಭಾಷಣದ ವೀಡಿಯೊ ಎಲ್ಲ ಕಡೆ ವೈರಲ್ ಆಗಿತ್ತು. ಇದನ್ನು ಸಾಕ್ಷಿಯಾಗಿರಿಸಿಕೊಂಡಿದ್ದ ರಾಂಪುರ ಜಿಲ್ಲೆಯ ಸಹಾಯಕ ಅಭಿವೃದ್ಧಿ ಅಧಿಕಾರಿ (ಪಂಚಾಯತ್) ಅನಿಲ್ ಕುಮಾರ್ ಚೌಹಾಣ್ ಅವರು ಶಹಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2019ರಲ್ಲಿ ದ್ವೇಷ ಭಾಷಣದ ಮತ್ತೊಂದು ಪ್ರಕರಣದಲ್ಲಿ ಅಜಂ ಖಾನ್ ಅವರನ್ನು ದೋಷಿ ಎಂದು ಘೋಷಿಸಲಾಯಿತು ಮತ್ತು ಅಕ್ಟೋಬರ್ 17, 2022ರಂದು ಜನಪ್ರತಿನಿಧಿಗಳ ನ್ಯಾಯಾಲಯವು ಮೂರು ವರ್ಷಗಳ ಕಾಲ ಅವರಿಗೆ ಜೈಲು ಶಿಕ್ಷೆಯನ್ನು ವಿಧಿಸಿತು, ನಂತರ ಅವರನ್ನು ಉತ್ತರ ಪ್ರದೇಶ ವಿಧಾನಸಭೆಯಿಂದ ಅನರ್ಹಗೊಳಿಸಲಾಗಿತ್ತು. 2023ರ ಮೇ ತಿಂಗಳಲ್ಲಿ ಇವರನ್ನು ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯವು ಅವರ ಮೇಲಿನ ದೋಷಾರೋಪಣೆಯನ್ನು ರದ್ದುಗೊಳಿಸಿತು ಮತ್ತು ಪ್ರಕರಣದಲ್ಲಿ ಅಜಂ ಖಾನ್ ಅವರನ್ನು ಖುಲಾಸೆಗೊಳಿಸಿತು.