ಹೊಸದಿಗಂತ ವರದಿ ಬಳ್ಳಾರಿ:
ಗೃಹ ಲಕ್ಷ್ಮೀ ಯೋಜನೆಯು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ನಲ್ಲಿ ನಮೂದಿಸಿರುವ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ. ಗಳನ್ನು ನೀಡಲಾಗುತ್ತಿದೆ. ಈ ಯೋಜನೆಗೆ ನೊಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಯುವಜನ, ಕ್ರೀಡೆ, ಪರಿಶಿಷ್ಟ ಪಂಗಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ನಗರದ ಎಸ್ಪಿ ವೃತ್ತದ ಬಳಿಯ ಸ್ತ್ರೀ ಸೇವಾನಿಕೇತನ ಆವರಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾಂಕೇತಿಕವಾಗಿ ಗೃಹಲಕ್ಷ್ಮೀ ಯೋಜನೆಯ ಪತ್ರವನ್ನು ವಿತರಿಸಿ ಮಾತನಾಡಿದರು.
ನಾವು ನೀಡಿದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆ ಮಹತ್ವದ್ದಾಗಿದೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲಿಕರಣವನ್ನು ಹೆಚ್ಚಿಸುವ ಹಾಗೂ ಕುಟುಂಬ ನಿರ್ವಹಣೆಯು ಉತ್ತಮವಾಗಿರಲು ಈ ಯೋಜನೆ ಸಹಕಾರಿಯಾಗಲಿದೆ. ಈಗಾಗಲೇ ಮೂರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ರಾಜ್ಯದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಇದರಲ್ಲಿ ಪ್ರಮುಖ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ರಾಜ್ಯದ ಮಹಿಳಾ ಯಜಮಾನಿಯ ಕುಟುಂಬದ ಹೊರೆ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದರು.
ಕುಟುಂಬದ ಯಜಮಾನಿ ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ. ಜಿಲ್ಲೆಯ 5 ತಾಲೂಕುಗಳಲ್ಲಿ ಒಟ್ಟು 3,45,125 ಫಲಾನುಭವಿಗಳಿದ್ದಾರೆ. ಇದರಲ್ಲಿ ಬಳ್ಳಾರಿ ತಾಲೂಕಿನಲ್ಲಿ 1,57,433, ಸಂಡೂರು 56,852, ಸಿರುಗುಪ್ಪ 69,350, ಕುರಗೋಡು 28,495 ಹಾಗೂ ಕಂಪ್ಲಿ ತಾಲೂಕಿನಲ್ಲಿ 32,995 ಫಲಾನುಭವಿಗಳಿದ್ದಾರೆ. ಕುಟುಂಬದ ಯಜಮಾನಿಯು ಪಡಿತರ ಚೀಟಿ ಸಂಖ್ಯೆ, ಯಜಮಾನಿಯ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಯಜಮಾನಿಯ ಆಧಾರ್ ಕಾರ್ಡ್ ಗೆ ಜೊಡಣೆಯಾಗಿರುವ ಬ್ಯಾಂಕ್ ಖಾತೆ ಹಾಗೂ ಪಾಸ್ ಬುಕ್ ಅಥವಾ ಫಲಾನುಭವಿಯ ಪರ್ಯಾಯ ಬ್ಯಾಂಕ್ ಖಾತೆ ವಿವರ ಮಾಹಿತಿ ಅಗತ್ಯವಿದೆ. ನೊಂದಣಿ ಕೇಂದ್ರಕ್ಕೆ ತೆರಳಿ ಈ ಎಲ್ಲ ಮಾಹಿತಿಗಳೊಂದಿಗೆ ಉಚಿತವಾಗಿ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್, ಪಾಲಿಕೆ ಮೇಯರ್ ಡಿ.ತ್ರಿವೇಣಿ ಸೇರಿದಂತೆ ಇತರರಿದ್ದರು.