ಹೊಸದಿಗಂತ ವರದಿ, ಕುಶಾಲನಗರ:
ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದ್ದು,ಶನಿವಾರ ಸಂಜೆಯಿಂದ 4500 ಕ್ಯೂ ಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಕಳೆದೊಂದು ತಿಂಗಳಿನಿಂದ ಮುಂಗಾರು ಕ್ಷೀಣಿಸಿದ್ದ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯ ಬರಿದಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯದ ಒಳ ಹರಿವಿನ ಪ್ರಮಾಣ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ.
ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳಾಗಿದ್ದು, ಶನಿವಾರ ನೀರಿನ 2854.12 ಅಡಿಗಳಿಗೆ ಏರಿಕೆಯಾಗಿದೆ. ಜಲಾಶಯಕ್ಕೆ 16 ಸಾವಿರಕ್ಕೂ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯ ಭದ್ರತೆಯ ದೃಷ್ಟಿಯಿಂದ ನೀರಿನ ಸಮತೋಲನ ಕಾಯ್ದುಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.
ನದಿ ದಂಡೆಯ ನಿವಾಸಿಗಳಿಗೆ ಮುನ್ನೆಚ್ಚರಿಕೆ: ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಒಳ ನೀರಿನ ಹರಿಯುವಿಕೆ ಗಂಟೆ ಗಂಟೆಗೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹಾರಂಗಿ ನೀರಾವರಿ ಇಲಾಖೆಯವರು ಹಾರಂಗಿ ಮತ್ತು ಕಾವೇರಿ ನದಿ ಪಾತ್ರದ ಜನ ಮತ್ತು ಜಾನುವಾರುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಮುನ್ಸೂಚನೆ ನೀಡಿದ್ದಾರೆ.
ಹಾರಂಗಿ ನದಿ ದಂಡೆಯ ಪ್ರದೇಶಗಳಾದ ಹುದುಗೂರು, ಮದಲಾಪುರ, ಮಲ್ಲೇನಹಳ್ಳಿ ಕಾಳಿದೇವನ ಹೊಸೂರು, ಕೂಡಿಗೆ ಭಾಗದ ಜನರಿಗೆ ಶನಿವಾರ ಬೆಳಗ್ಗೆಯೇ ತಿಳುವಳಿಕೆ ನೀಡಲಾಗಿದೆ.
ಹಾರಂಗಿ ಮತ್ತು ಕಾವೇರಿ ನದಿಯು ಕೂಡಿಗೆಯಲ್ಲಿ ಸಂಗಮವಾಗಿ ಮುಂದೆ ಸಾಗುವ ಕಾವೇರಿ ನದಿ ದಂಡೆಯ ಪ್ರದೇಶಗಳಾದ ಕಣಿವೆ, ಹೆಬ್ಬಾಲೆ ತೊರೆನೂರು, ಶಿರಂಗಾಲ ವ್ಯಾಪ್ತಿಯ ನದಿ ಪಾತ್ರದ ಜನರಿಗೂ ಆಯಾ ಗ್ರಾಮ ಪಂಚಾಯತಿ ವತಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ಬಗ್ಗೆ ತಿಳುವಳಿಕೆ ಪತ್ರಗಳನ್ನು ನೀಡಲಾಗಿದೆ.
ಶನಿವಾರ ಸಂಜೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ 4500 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಜಲಾಶಯದ ನಾಲ್ಕು ಕ್ರೆಸ್ಟ್ ಗೇಟ್’ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದ್ದು, ಮಳೆ ಮುಂದುವರಿದಲ್ಲಿ ನದಿಗೆ ಬಿಡುವ ನೀರಿನ ಪ್ರಮಾಣವೂ ಹೆಚ್ಚಳವಾಗಲಿದೆ.