ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿನಬೆಳಗಾದರೆ ಯಾವುದಾದರೊಂದು ಅಪಘಾತ ಹತ್ತಾರು ಜನರ ಜೀವವನ್ನು ತೆಗೆದಿರುತ್ತದೆ. ಯಾವುದಾದರೊಂದು ರೂಪದಲ್ಲಿ ಜವರಾಯ ಯಮಪಾಶವನ್ನಿಟ್ಟುಕೊಂಡು ಕಾದು ಕುಳಿತಿರುತ್ತಾನೆ. ಅಂತೆಯೇ ಕೆರೆಯಲ್ಲಿ ಬಸ್ವೊಂದು ಮುಳುಗಿ ಮಕ್ಕಳು ಸೇರಿ 17 ಮಂದಿ ಸಾವನ್ನಪ್ಪಿರುವ ಘಟನೆ ಬಾಂಗ್ಲಾದಲ್ಲಿ ನಡೆದಿದೆ.
ಪಿರೋಜ್ಪುರದ ಭಂಡಾರಿಯಾದಿಂದ ಬಾರಿಶಾಲ್ಗೆ ಹೊರಟಿದ್ದ ಬಸ್ ಬರಿಶಾಲ್-ಖುಲ್ನಾ ಹೆದ್ದಾರಿಯ ಛತ್ರಕಾಂಡದಲ್ಲಿ ರಸ್ತೆ ಬದಿಯ ಕೆರೆಗೆ ಉರುಳಿ ಬಿದ್ದಿದೆ. ಈ ಬಸ್ನ ಸಾಮರ್ಥ್ಯ 52 ಪ್ರಯಾಣಿಕರಾದರೂ ಬಸ್ 60ಜನರೊಂದಿಗೆ ಪ್ರಯಾಣಿಸಿತ್ತು. ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ದಿದ್ದ ಬಸ್ಸು ಹೊಂಡಕ್ಕೆ ಬಿದ್ದಿದ್ದು, ಭಾರದಿಂದಾಗಿ ತಕ್ಷಣವೇ ನೀರಿನಲ್ಲಿ ಮುಳುಗಿದೆ.
ಮೋಮಿನ್ ಎಂಬ ಯುವಕ ಅಪಘಾತದಿಂದ ಪಾರಾಗಿದ್ದಾನೆ. ಉಳಿದಂತೆ 17 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 35ಕ್ಕೂ ಹೆಚ್ಚು ಜನ ಗಾಯಾಗಳಿಂದ ಆಸ್ಪತ್ರೆ ಪಾಲಾಗಿದ್ದಾರೆ. ಬಲಿಯಾದವರಲ್ಲಿ ಹೆಚ್ಚಿನವರು ಪಿರೋಜ್ಪುರದ ಭಂಡಾರಿಯಾ ಉಪಜಿಲಾ ಮತ್ತು ಜಲ್ಕಟಿಯ ರಾಜಾಪುರ ಪ್ರದೇಶದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.