ಫೇಸ್‌ಬುಕ್‌ ಪ್ರೇಮಾಯಣ: ಗೆಳೆಯನಿಗಾಗಿ ಗಡಿ ದಾಟಿ ಪಾಕ್‌ಗೆ ತೆರಳಿದ ಭಾರತೀಯ ಮಹಿಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ತನ್ನ ಪ್ರಿಯಕರನಿಗಾಗಿ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿರುವ ಬಗ್ಗೆ ತನಿಖೆ ನಡೆಯುತ್ತಿರುವಾಗ ಇನ್ನೊಂದು ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಈ ಘಟನೆಯಲ್ಲಿ ಪಾಕ್‌ನವರು ಭಾರತಕ್ಕೆ ಬಂದಿದ್ದಲ್ಲ, ಭಾರತೀಯ ಮಹಿಳೆ ತನ್ನ ಗೆಳೆಯನನ್ನು ಭೇಟಿಯಾಗಲು ಗಡಿ ದಾಟಿದ್ದಾರೆ.

ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಭಾರತೀಯ ಮಹಿಳೆಯೊಬ್ಬರು ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಭೇಟಿಯಾಗಲು ಪ್ರಯಾಣ ಬೆಳೆಸಿದ್ದಾರೆ.

35 ವರ್ಷದ ಅಂಜು ಜುಲೈ 21 ರಂದು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ದಿರ್ ನಗರಕ್ಕೆ ತನ್ನ ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾ ಖಾನ್ ಅವರನ್ನು ಭೇಟಿಯಾಗಲು ಹೋಗಿದ್ದರು ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಅಂಜು ಮತ್ತು ನಸ್ರುಲ್ಲಾ ಖಾನ್ (29) ಫೇಸ್‌ಬುಕ್ ಮೂಲಕ ಪರಸ್ಪರ ಭೇಟಿಯಾದರು. ನಸ್ರುಲ್ಲಾ ಅವರು ಹಿಂದೆ ಶಾಲಾ ಶಿಕ್ಷಕರಾಗಿದ್ದರು, ಪ್ರಸ್ತುತ ವೈದ್ಯಕೀಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಭೇಟಿಯಾಗಿ ಆ ಭೇಟಿ ಈಗ ಪ್ರೀತಿಯಾಗಿ ಬದಲಾಗಿ ಗಡಿ ದಾಟುವ ಮಟ್ಟಕ್ಕೆ ಬೆಳೆದು ನಿಂತಿದೆ.

ಜೈಪುರಕ್ಕೆ ಹೋಗುವ ನೆಪದಲ್ಲಿ ಗುರುವಾರ ಮನೆಯಿಂದ ಹೊರ ಹೋಗಿದ್ದಾಗಿ, ಪ್ರಸ್ತುತ ಆಕೆ ಪಾಕಿಸ್ತಾನದಲ್ಲಿದ್ದಾರೆಂದು ಮಹಿಳೆಯ ಪತಿ ಅರವಿಂದ್ ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ಸ್ನೇಹಿತನನ್ನು ಭೇಟಿಯಾಗುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದಳು ಎಂದು ಅರವಿಂದ್ ಪೊಲೀಸರಿಗೆ ತಿಳಿಸಿದ್ದಾರೆ. ಅಂಜು ಪಾಕ್‌ ಪುರುಷನೊಂದಿಗೆ ವಾಟ್ಸಾಪ್, ಫೇಸ್‌ಬುಕ್‌ ಮೂಲಕ ಸಂಪರ್ಕದಲ್ಲಿದ್ದರು ಎಂದು ಅರವಿಂದ್ ಹೇಳಿಕೆ ಕೊಟ್ಟಿದ್ದಾರೆ. ಭಾನುವಾರ ಸಂಜೆ 4 ಗಂಟೆಗೆ ಕರೆ ಮಾಡಿ ತಾನು ಲಾಹೋರ್‌ನಲ್ಲಿದ್ದೇನೆ ಎರಡು ಮೂರು ದಿನಗಳಲ್ಲಿ ಬರುವುದಾಗಿ ತಿಳಿಸಿದ್ದಾರಂತೆ.

ಅಂಜು ಪತಿ ಅರವಿಂದ್‌ ತನ್ನ ಪತ್ನಿ ಮತ್ತೆ ವಾಪಸಾಗುತ್ತಾಳೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಇಬ್ಬರು ಮಕ್ಕಳನ್ನು ಹೊಂದಿರುವ ದಂಪತಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ವಿವಾಹವಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!