ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಂತ ವೇಗವಾಗಿ, ಕಡಿಮೆ ಸಮಯದಲ್ಲಿ ಮಾಡುವ ತಿಂಡಿ ಎಂದರೆ ಅದು ಉಪ್ಪಿಟ್ಟು…! ತಿಂಡಿಗೆ ಉಪ್ಪಿಟ್ಟೇ? ಎಂದು ಮೂಗು ಮುರಿಯುವ ಮಂದಿಯೂ ಇದ್ದಾರೆ. ಬೆಳಗ್ಗಿನ ಉಪಾಹಾರಕ್ಕೆ, ಅಥವಾ ಸಂಜೆಯ ತಿಂಡಿಗೆ ಉಪ್ಪಿಟ್ಟು ಸಾಮಾನ್ಯ. ಮಾಮೂಲಿ ಉಪ್ಪಿಟ್ಟೆಂದರೆ ಜನ ಇಷ್ಟಪಡುವುದು ಕೊಂಚ ಕಷ್ಟ. ಆದರೆ ಈ ಶೈಲಿಯ ಉಪ್ಪಿಟ್ಟು ನೀವು ಮಾಡಿದ್ದೇ ಆದಲ್ಲಿ ಒಂದು ಚೂರು ವೇಸ್ಟ್ ಮಾಡದೆ ಖಾಲಿ ಮಾಡೋದಂತೂ ಗ್ಯಾರಂಟಿ!
ಹೇಳದೆ ಕೇಳದೆ ಮನೆಗೆ ಯಾರಾದ್ರೂ ಗೆಸ್ಟ್ ಬಂದ್ರೆ ತಿಂಡಿ ಏನುಕೊಡಲಿ ಎಂಬ ಚಿಂತೆ ಬಿಟ್ಟು ಈ ರೀತಿಯ ಉಪ್ಪಿಟ್ಟು ಮಾಡಿಕೊಡಿ.
ಬೇಕಾಗುವ ಸಾಮಗ್ರಿ: ಸಣ್ಣ ರವೆ ಒಂದು ಕಪ್, ಹುಣಸೆ ಹಣ್ಣಿನ ರಸ ಎರಡು ಟೀ ಸ್ಪೂನ್, ಸಾಸಿವೆ ಒಂಟು ಟೀ ಸ್ಪೂನ್, ಜೀರಿಗೆ ಒಂದು ಟೀ ಸ್ಪೂನ್, ಕಡಲೆ ಬೇಳೆ ಅರ್ಧ ಟೀ ಸ್ಪೂನ್, ಉದ್ದಿನ ಬೇಳೆ ಅರ್ಧ ಟೀ ಸ್ಪೂನ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಕರಿಬೇವಿನೆಲೆ ಸ್ವಲ್ಪ, ಚಿಟಿಕಿ ಇಂಗು, ಶುದ್ದ ತೆಂಗಿನೆಣ್ಣೆ ಸ್ವಲ್ಪ, ಉಪ್ಪು, ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಂ, ಹಸಿಮೆಣಸು.
ಮಾಡುವ ವಿಧಾನ: ಬಾಣಲೆಯನ್ನು ಸ್ಟೌಮೇಲಿಟ್ಟು ಒಂದು ಟೀ ಸ್ಪೂನ್ ತೆಂಗಿನೆಣ್ಣೆ ಹಾಕಿ ರವೆಯನ್ನು ಹೊಂಬಣ್ಣಕ್ಕೆ ತಿರುಗುವ ತನಕ ಫ್ರೈಮಾಡಿ ಪತ್ಯೇಕ ಪಾತ್ರೆಗೆ ಹಾಕಿಟ್ಟುಕೊಳ್ಳಿ.
ಅದೇ ಬಾಣೆಲೆಗೆ ನಾಲ್ಕು ಟೀ ಸ್ಪೂನ್ ತೆಂಗಿನೆಣ್ಣೆ ಹಾಕಿ. ಸಾಸಿವೆ, ಉದ್ದಿನಬೇಳೆ, ಕಡಲೇ ಬೇಳೆ ಹಾಕಿ ಸಾಸಿವೆ ಸಿಡಿಯುವ ತನಕ ಫ್ರೈಮಾಡಿ. ಕತ್ತರಿಸಿದ ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಂ, ಹಸಿಮೆಣಸು, ಕರಿಬೇವು ಹಾಕಿ ಬಾಡಿಸಿಕೊಳ್ಳಿ. ಹುಣಸೆ ಹಣ್ಣಿನ ರಸ ಸೇರಿಸಿಕೊಳ್ಳಿ. ಮೂರು ಕಪ್ ನೀರು ಸೇರಿಸಿ ಕುದಿಸಿ, ಉಪ್ಪು ಹಾಕಿ. ಚೆನ್ನಾಗಿ ಕುದಿ ಬಂದ ನಂತರ ರವೆ ಸೇರಿಸಿ ಬೇಯಿಸಿ. ಬಿಸಿ ಬಿಸಿಯಾದ ಟೇಸ್ಟಿ ಉಪ್ಪಿಟ್ಟು ರೆಡಿ!