ಹೊಸದಿಗಂತ ಡಿಜಿಟಲ್ ಡೆಸ್ಕ್:
ಜುಲೈ 27 ರಂದು ಕರೆ ನೀಡಿದ್ದ ಬೆಂಗಳೂರು ಬಂದ್ (Bengaluru Bandh) ಅನ್ನು ಖಾಸಗಿ ಸಾರಿಗೆ ಒಕ್ಕೂಟ ವಾಪಸ್ ಪಡೆದಿದೆ.
ಇಂದು ಬೆಂಗಳೂರಿನ ಶಾಂತಿನಗರದ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಖಾಸಗಿ ಸಾರಿಗೆ ಒಕ್ಕೂಟದ ಜೊತೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಭೆ ನಡೆಸಿದರು.
ಇದಾದ ಬಳಿಕ ಬೇಡಿಕೆ ಈಡೇರಿಕೆಯ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ಭರವಸೆ ನೀಡಿದ ಹಿನ್ನೆಲೆ ಸರ್ಕಾರಕ್ಕೆ ಆಗಸ್ಟ್ 10ರ ವರೆಗೆ ಕಾಲಾವಕಾಶ ನೀಡಿ ಬಂದ್ ವಾಪಾಸ್ ಪಡೆದರು.
ಶಕ್ತಿ ಯೋಜನೆ ಜಾರಿ ನಂತರ ಖಾಸಗಿ ಬಸ್, ಆಟೋ ಟ್ಯಾಕ್ಸಿ ಮಾಲೀಕರಿಗೆ ಭಾರೀ ಹೊಡೆತ ನೀಡಿದೆ. ಹೀಗಾಗಿ ಯೋಜನೆ ಸ್ಥಗಿತಕ್ಕೆ ಖಾಸಗಿ ಸಾರಿಗೆ ಒಕ್ಕೂಟ ಆಗ್ರಹಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆಟೋ ಚಾಲಕರ ಸಮಸ್ಯೆ ಬೇರೆ ಇದೆ, ಟ್ಯಾಕ್ಸಿ ಸಮಸ್ಯೆಯೂ ಇದೆ. ಶಕ್ತಿಯೋಜನೆ ಕುರಿತು ನಾನೊಬ್ಬನೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಬೇಕು ಎಂದರು.
ಬಂದ್ಗೆ ಕರೆ ನೀಡಿದ ಹಿನ್ನೆಲೆ ಇಂದು ಬೆಳಗ್ಗೆ ನಡೆದಿದ್ದ ಸಭೆಯಲ್ಲಿ ಒಮ್ಮತ ಮೂಡಿ ಬಾರದ ಹಿನ್ನೆಲೆ ಸಭೆ ವಿಫಲಗೊಂಡಿತ್ತು. ಹೀಗಾಗಿ ಮಧ್ಯಾಹ್ನದ ನಂತರ ಮತ್ತೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಒಕ್ಕೂಟಕ್ಕೆ ಬೇಡಿಕೆ ಈಡೇರಿಸುವ ಬಗ್ಗೆ ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ. ಹೀಗಾಗಿ ಸಂಧಾನ ಸಭೆ ಯಶಸ್ವಿಯಾಗಿದ್ದು, ಬಂದ್ ವಾಪಸ್ ಪಡೆಯಲಾಗಿದೆ.