ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಬಾಧೆ ಹೆಚ್ಚಾಗಿರುತ್ತದೆ. ದೇಹದಲ್ಲಿ ಇಮ್ಯೂನಿಟಿ ಪವರ್ ಕಡಿಮೆ ಆದರೆ ಅಂತಹವರಿಗೆ ಕಾಯಿಲೆಗಳು ಅತಿ ಬೇಗ ಬರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು , ದೇಹಾರೋಗ್ಯ ಕಾಪಾಡಿಕೊಳ್ಳಲು ಇಂತಹ ಕೆಲವು ಅಂಶಗಳನ್ನು ನೀವು ರೋಢಿಸಿಕೊಳ್ಳಬಹುದಾಗಿದೆ. ಮಳೆಗಾಲದಲ್ಲಿ ಶೀತ ಹವಾಮಾನ. ಹಾಗಾಗಿ ದೇಹವನ್ನು ಬೆಚ್ಚಗಿಡಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ. ದೇಹಕ್ಕೆ ಹೊರಗಿನಿಂದ ಆಕ್ರಮಣ ಮಾಡುವ ವೈರಸ್‌ಗಳ ವಿರುದ್ಧ ಹೋರಾಡಲು ಬೇಕಾಗಿರುವಂತಹ ರೋಗ ನಿರೋಧಕ ಶಕ್ತಿಯೂ ನಮ್ಮ ದೇಹದಲ್ಲಿರುವುದು ಅತೀ ಮುಖ್ಯ.
ಮಲೇರಿಯಾ, ಡೆಂಗ್ಯೂ ಮೊದಲಾದ ಪ್ರಕರಣಗಳು ಇದೀಗ ಹೆಚ್ಚಾಗಿದೆ. ಮಳೆಗಾಲದಲ್ಲಿ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗಿ ರೋಗ ಹರಡಲು ಪ್ರಮುಖ ಕಾರಣವಾಗುತ್ತವೆ. ಹೀಗಿರುವಾಗ ದೇಹದಲ್ಲಿ ಆರೋಗ್ಯವನ್ನು ಕಾಪಾಡಲು ಹರಸಾಹಸ ಪಡಬೇಕಾಗುತ್ತದೆ. ನಿತ್ಯ ಜೀವನದಲ್ಲಿ ನಾವು ಬಳಸುವ ಆಹಾರಚರ್ಯೆಯನ್ನು ಬದಲಾಯಿಸಿ, ಜೀವನ ಶೈಲಿಯನ್ನು ಕೊಂಚ ಬದಲಾವಣೆ ಮಾಡಿಕೊಂಡರೆ ಪೂರ್ಣಾರೋಗ್ಯ ಪಡೆಯಬಹುದಾಗಿದೆ.
ಶುದ್ಧ ಅರಶಿನದಲ್ಲಿ ಸಾಕಷ್ಟು ರೋಗನಿರೋಧಕ ಅಂಶವಿದೆ. ಇದು ಒಂದು ರೀತಿಯ ಮಸಾಲೆಯಾಗಿದ್ದು, ಆಹಾರದಲ್ಲಿ ಬಳಸಲಾಗುತ್ತದೆ. ಅರಶಿನ ನಂಜಿನಂಶವನ್ನು ಹೊರಹಾಕಿ ದೇಹವನ್ನು ರೋಗನಿರೋಧಕವಾಗಿ ಕಾಪಾಡಲು ಸಹಕಾರಿಯಾಗುತ್ತದೆ.
ಅಡುಗೆ ಮನೆಯಲ್ಲಿ ಲಭ್ಯವಾಗುವ ಬೆಳ್ಳುಳ್ಳಿಯೂ ರೋಗ ನಿರೋಧಕ ಅಂಶವನ್ನು ಹೊಂದಿದೆ. ಆಹಾರದಲ್ಲಿ ರುಚಿ ಹೆಚ್ಚಿಸುವ ವಿಶೇಷ ಗುಣ ಈ ಬೆಳ್ಳುಳ್ಳಿಗೆ ಇದೆ. ಇದು ಉತ್ತಮ ರೋಗನಿರೋಧಕ ಅಂಶವನ್ನು ಹೊಂದಿದ್ದು, ಆಂಟಿ ಫಂಗಲ್, ಬ್ಯಾಡ್ ಬ್ಯಾಕ್ಟೀರಿಯಾಗಳನ್ನು ವಿರೋಧಿಸುವ ಕಾರ್ಯ ಮಾಡುತ್ತದೆ.
ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಲು ವಿಟಮಿನ್ ಸಿ ಹೇರಳವಾಗಿರುವ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ವಿಟಮಿನ್ ಸಿ ದೇಹದಲ್ಲಿ ಬಿಳಿ ರಕ್ತಕಣಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ನಿಂಬೆಹಣ್ಣು, ಕಿತ್ತಳೆ, ಅನನಾಸ್ ಮೊದಲಾದ ಹಣ್ಣುಗಳಲ್ಲಿ ಸಿಟ್ರಸ್ ಅಂಶ ಹೇರಳವಾಗಿದ್ದು ಇವುಗಳ ಬಳಕೆ ಹೆಚ್ಚು ಮಾಡಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹಾರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ.
ಇನ್ನೊಂದು ಮನೆ ಮದ್ದಾಗಿರುವ ಶುಂಠಿ ದೇಹವನ್ನು ಬೆಚ್ಚಾಗಿಡುವಂತೆ ಮಾಡುತ್ತದೆ. ಕೆಮ್ಮು, ಶೀತ, ಗಂಟಲುನೋವು, ಹೊಟ್ಟೆಯುಬ್ಬರಿಸುವಿಕೆ, ಜ್ವರ ಮೊದಲಾದವುಗಳಿಗೆ ಶುಂಠಿ ರಾಮಭಾಣ. ಶುಂಠಿ ಕಷಾಯ ಮಾಡಿ ಕುಡಿದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಊಟದಲ್ಲಿ ಬಳಸುವ ಮೊಸರಿಗೂ ರೋಗನಿರೋಧಕ ಶಕ್ತಿಯಿದೆ. ಸರಿಯಾದ ನಿದ್ರೆ ಹಾಗೂ ಜೀರ್ಣ ಕ್ರಿಯೆಗೆ ಮೊಸರು ಸೇವಿಸುವುದು ಉತ್ತಮ.