ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಕೃತಿಕ ವಿಕೋಪ ನಿರ್ವಹಣಾ ಯೋಜನೆಯನ್ನು ಹೆಚ್ಚು ಪರಿಣಾಮಕಾರಿ ಮಾಡಲು ಮತ್ತು ಜೀವ ಹಾನಿಯನ್ನು ತಡೆಗಟ್ಟಲು ಪುನರ್ ವಿನ್ಯಾಸಗೊಳಿಸಿ ಜಾರಿ ಮಾಡಲಾಗಿದೆ. ಅದರಂತೆ ಗ್ರಾಮ ಪಂಚಾಯತುಗಳು, ನಗರಾಡಳಿತ ಸಂಸ್ಥೆಗಳಲ್ಲಿ ಮತ್ತು ಮಂಗಳೂರು ಮಹಾ ನಗರಪಾಲಿಕೆಯಲ್ಲಿ ವಾರ್ಡ್ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ. ಎಲ್ಲಾ ತಂಡಗಳಿಗೆ ಕನಿಷ್ಟ ತಾಲೂಕು ಮಟ್ಟದ ಅಧಿಕಾರಿಗಳನ್ನು ಮಾರ್ಗದರ್ಶಿ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಜೀವ ಹಾನಿಯನ್ನು ಶೂನ್ಯಕ್ಕೆ ಇಳಿಸುವುದು ಮತ್ತು ಸಂಪನ್ಮೂಲ ಹಾನಿಯನ್ನು ಕನಿಷ್ಟ ಮಟ್ಟಕ್ಕೆ ಇಳಿಸುವುದು ಜಿಲ್ಲಾಡಳಿತದ ಉದ್ದೇಶವಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯತುಗಳಿಗೆ ಒಂದರಂತೆ ಮತ್ತು ನಗರಾಡಳಿತ ಸಂಸ್ಥೆಗಳನ್ನು ಸೇರಿಸಿಕೊಂಡು ಒಟ್ಟು 296 ಪ್ರಾಕೃತಿಕ ವಿಕೋಪ ನಿರ್ವಹಣಾ ಯೋಜನೆಗಳನ್ನು ರೂಪಿಸಲಾಗಿದೆ. ಪ್ರಕೃತಿ ವಿಕೋಪದ ಸಣ್ಣ ಸಣ್ಣ ಸಾಧ್ಯತೆಗಳನ್ನು ಪತ್ತೆ ಮಾಡಿ ನಿರ್ವಹಣೆ ಮಾಡಲು ಇದರಿಂದ ಸಾಧ್ಯವಾಗಲಿದೆ. ಸಾರ್ವಜನಿಕರು ತಮ್ಮ ಹತ್ತಿರದ ತಂಡಗಳಿಗೆ ಮಾಹಿತಿ ನೀಡುವ ಮೂಲಕ ವಿಕೋಪಗಳಿಗೆ ಪರಿಹಾರ ಕಾಣಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಪುನರ್ ವಿನ್ಯಾಸದ ಯೋಜನೆಯಿಂದ ಅನುದಾನ, ಇತರ ಸಂಪನ್ಮೂಲ ಮತ್ತು ಅಕಾರ ಕೆಳಗಿನ ಹಂತದಲ್ಲಿಯೇ ಲಭ್ಯವಾಗಲಿದೆ. ಎನ್ಡಿಆರ್ಎಫ್ನ 25 ಮಂದಿ, ಎಸ್ಡಿಆರ್ಎಫ್ನ 38 ಮಂದಿ ಮತ್ತು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ 190 ಸಿಬ್ಬಂದಿ ಪ್ರಾಕೃತಿಕ ವಿಕೋಪ ನಿರ್ವಹಣೆಯ ತಂಡದಲ್ಲಿದ್ದಾರೆ. 74 ಮಂದಿ ಗೃಹ ರಕ್ಷಕರ ಸೇವೆಯೂ ಲಭ್ಯ ಇದೆ. ಇವರೆಲ್ಲರನ್ನೂ ವಿಂಗಡಿಸಿ ತಂಡಗಳನ್ನಾಗಿ ಮಾಡಿ ಅಗತ್ಯ ಸ್ಥಳಗಳಿಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿವರಿಸಿದರು.
ಕಟ್ಟುನಿಟ್ಟಿನ ಕ್ರಮ
ಜಿಲ್ಲೆಯಲ್ಲಿ ನೆರೆ, ಭೂಕುಸಿತ ಮತ್ತು ಇತರ ಅಪಾಯಕರ ಸ್ಥಳಗಳನ್ನು ಗುರುತಿಸಲಾಗಿದೆ. ಅಂತಹ ಸ್ಥಳಗಳನ್ನು ಜನತೆ ತಾತ್ಕಾಲಿಕವಾಗಿ ತೆರವುಗೊಳಿಸಲು ಸೂಚಿಸಲಾಗುವುದು. ಒಂದು ವೇಳೆ ತೆರವುಗೊಳಿಸಲು ನಿರಾಕರಿಸಿದರೆ ಪೊಲೀಸ್ ಸಹಾಯ ಪಡೆದು ತೆರವುಗೊಳಿಸುವುದು ಅನಿವಾರ್ಯವಾಗಲಿದೆ. ಅಂತೆಯೇ ಜಿಲ್ಲಾಡಳಿತದ ಸೂಚನಾ ಫಲಕಗಳ ನಿರ್ದೇಶನಗಳನ್ನು ಉಲ್ಲಂಘಿಸಿದರೆ ಅಂತಹ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಟ್ರಕ್ಕಿಂಗ್ ಪಾಯಿಂಟ್ ಬಂದ್
ಟ್ರಕ್ಕಿಂಗ್ ಪಾಯಿಂಟ್ಗಳು, ಪುಣ್ಯಕ್ಷೇತ್ರಗಳು ಮತ್ತು ಬೀಚ್ಗಳಲ್ಲಿ ಜನತೆ ನೀರಿಗೆ ಇಳಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬ್ಯಾರಿಕೇಡ್, ಸೂಚನಾ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಗುವುದು. ಶಿಥಿಲ ಕಾಲು ಸಂಕ, ಸೇತುವೆ, ಭೂಕುಸಿತ ಸಾಧ್ಯತೆಯ ಜಾಗಗಳಲ್ಲೂ ಸೂಚನಾ ಫಲಕಗಳನ್ನು ಜಿಲ್ಲಾಡಳಿತ ಅಳವಡಿಸಲಿದೆ. ಅವುಗಳನ್ನು ನಿರ್ಲಕ್ಷಿಸುವ ಮಂದಿ ಕಾನೂನು ಕ್ರಮ ಎದುರಿಸ ಬೇಕಾಗುತ್ತದೆ ಎಂದು ಮುಲ್ಲೈ ಮುಗಿಲನ್ ನುಡಿದರು.
87 ಭೂ ಕುಸಿತ ಸಾಧ್ಯತೆ ಸ್ಥಳ
ಚಾರ್ಮಾಡಿ ಘಾಟಿ (charmadi ghat) ಯಲ್ಲಿ ಭೂ ಕುಸಿತ ಉಂಟಾಗಬಹುದಾದ 34 ಜಾಗಗಳನ್ನು ಗುರುತಿಸಲಾಗಿದೆ . ದಕ್ಷಿಣ ಕನ್ನಡದಲ್ಲಿ ನೆರೆ ಸಮಸ್ಯೆ ಎದುರಾಗ ಬಹುದಾದ 18 ಸ್ಥಳಗಳು ಮತ್ತು 87 ಭೂ ಕುಸಿತ ಸಾಧ್ಯತೆಯ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸ್ಥಳೀಯ ಮಟ್ಟದಲ್ಲಿ ತಂಡಗಳು ಇರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪಕುಮಾರ್ ಜೈನ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷ್ಯಂತ್ ಸಿ.ಬಿ ಉಪಸ್ಥಿತರಿದ್ದರು.